ಕುಮಟಾ ಮಾಸೂರು ಕ್ರಾಸಿನಲ್ಲಿರುವ ಅಪಾಯಗಳ ಬಗ್ಗೆ ಎಲ್ಲಾ ಕಡೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿದ್ದು, 17 ದಿನದೊಳಗೆ ಅಲ್ಲಿಂದ ಸ್ಪಂದನೆ ಸಿಕ್ಕಿದೆ.
ಜನತಾ ಫ್ಲೋಟ್ ಮಾಸೂರ್ ಕ್ರಾಸಿನ ರಸ್ತೆ ಅತ್ಯಂತ ಅಪಾಯಕಾರಿಯಾದ ಬಗ್ಗೆ ಆ ಭಾಗದ ಜನ ಎಲ್ಲಾ ಕಡೆ ಅರ್ಜಿ ಸಲ್ಲಿಸಿದ್ದರು. ಅಲ್ಲಿರುವ `ಅಂಗನವಾಡಿ ಹಾಗೂ ಶಾಲಾ ಮಕ್ಕಳ ಸುರಕ್ಷತೆಗಾಗಿ ನಾಮಫಲಕ ಅಳವಡಿಸಬೇಕು’ ಎಂದು ಆಗ್ರಹಿಸಿದ್ದರು. ಜೊತೆಗೆ `ರಸ್ತೆಗೆ ಅಡ್ಡಲಾಗಿ ಹಂಪ್ ನಿರ್ಮಿಸಬೇಕು’ ಎಂದು ಒತ್ತಾಯಿಸಿದ್ದರು.
ಸ್ಥಳೀಯ ಆಡಳಿತದಿಂದ ಹಿಡಿದು ಶಾಸಕ-ಸಚಿವರವರೆಗೆ ದೂರು ಸಲ್ಲಿಸಿದರೂ ಅಲ್ಲಿನ ಸಮಸ್ಯೆ ಬಗೆಹರಿದಿರಲಿಲ್ಲ. ಆ ಭಾಗದಲ್ಲಿ ಅಪಘಾತದ ಪ್ರಮಾಣ ಹೆಚ್ಚಳವಾಗಿದ್ದು, ಶಿಕ್ಷಕರೊಬ್ಬರು ಸಾವನಪ್ಪಿದರೂ ಸಮಸ್ಯೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮುಖ್ಯಮಂತ್ರಿಗೆ ಪತ್ರ ಬರೆದರೂ ಅದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದರು.
ಇದೀಗ ಕಾರವಾರದ ಲೋಕೋಪಯೋಗಿ ಇಂಜಿನಿಯರ್’ಗೆ ಕಾನೂನು ಸೇವಾ ಪ್ರಾಧಿಕಾರದಿಂದ ಸೂಚನೆ ರವಾನೆಯಾಗಿದೆ. ಜನರ ಬೇಡಿಕೆಯ ಪ್ರಕಾರ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ. `ಕಾನೂನಿನ ಅಸ್ತ್ರ ಬಳಸಿದರೆ ಅಧಿಕಾರಿಗಳು ಕೆಲಸ ಮಾಡಿಕೊಡಲೇ ಬೇಕು. ಒಂದುವರೆ ವರ್ಷದಿಂದ ಆಗದ ಕೆಲಸದ ಬಗ್ಗೆ ದೂರು ನೀಡಿದ್ದರಿಂದ ಕಾನೂನು ಸೇವಾ ಪ್ರಾಧಿಕಾರ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹೇಳಿದ್ದಾರೆ.
