ನಿರಂತರ ಸಮಾಜಮುಖಿ ಕೆಲಸ ಮಾಡುತ್ತಿರುವ `ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್’ ಸಂಸ್ಥೆ ಸ್ವಾತಂತ್ರ ಉತ್ಸವದ ಅಂಗವಾಗಿ ಜೊಯಿಡಾ ಜನರಿಗೆ ಉಚಿತ ನೇತ್ರ ತಪಾಸಣಾ ಕಾರ್ಯಕ್ರಮ ಆಯೋಜಿಸಿದೆ. ಅರ್ಹರಿಗೆ ಉಚಿತ ಕನ್ನಡಕ ವಿತರಣೆಯ ಜವಾಬ್ದಾರಿಯನ್ನು ಈ ಸಂಸ್ಥೆ ಹೊಂದಿದೆ.
`ಪ್ರತಿಯೊಬ್ಬರ ಜೀವನವನ್ನು ಅರ್ಥಪೂರ್ಣವಾಗಿ ರೂಪಿಸೋಣ’ ಎಂಬ ಘೋಷವಾಕ್ಯದೊಂದಿಗೆ ಈ ಶಿಬಿರ ಆಯೋಜಿಸಲಾಗಿದೆ. ಸಮಾಜದಲ್ಲಿ ಹಿಂದುಳಿದವರಿoದ ಆಸ್ಪತ್ರೆ ಓಡಾಟ ಕಷ್ಟ ಎಂದು ಅರಿತ ಸಂಸ್ಥೆಯವರು ಅವರಿದ್ದ ಊರಿಗೆ ತೆರಳಿ ಸೇವೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಅಗಷ್ಟ 15ರಂದು ಬೆಳಗ್ಗೆ 10ಗಂಟೆಗೆ ಜೊಯಿಡಾದ ಕುಣಬಿ ಭವನದಲ್ಲಿ ಆರ್ಥಿಕವಾಗಿ ಹಿಂದುಳಿದವರ ನೇತ್ರ ತಪಾಸಣಾ ಶಿಬಿರ ನಡೆಯಲಿದೆ.
ಕಾರ್ಕಳ, ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಮಾನ ಮನಸ್ಕರ ತಂಡ ಈ ಸಂಸ್ಥೆ ಕಟ್ಟಿದೆ. ಕಳೆದ 8 ವರ್ಷಗಳಿಂದ ಈ ಸಂಸ್ಥೆಯವರು ಕುಗ್ರಾಮಗಳ ಭೇಟಿ, ಕನ್ನಡ ಶಾಲಾ ಕಟ್ಟಡಗಳ ನವೀಕರಣ, ಮಕ್ಕಳ ಶೈಕ್ಷಣಿಕ ಸಮಸ್ಯೆಗೆ ಸ್ಪಂದನೆ ಹಾಗೂ ಉಚಿತ ಆರೋಗ್ಯ ಶಿಬಿರ ಆಯೋಜಿಸುತ್ತ ಬಂದಿದ್ದಾರೆ. `ಈ ಮಾನವೀಯ ಕೆಲಸದಿಂದ ಇನ್ನೂ ಅನೇಕರಿಗೆ ಸ್ಪೂರ್ತಿ ಸಿಗಲಿ’ ಎಂಬುದು ಸಂಸ್ಥೆಯ ಆಶಯ.
