ಧರ್ಮಸ್ಥಳದಲ್ಲಿನ ದೃಶ್ಯಾವಳಿಗಳ ಚಿತ್ರಿಕರಣಕ್ಕೆ ತೆರಳಿದ್ದ ಪತ್ರಕರ್ತರ ಮೇಲೆ ನಡೆದ ಆಕ್ರಮಣವನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಹಾಗೂ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಆಗ್ರಹಿಸಿದ್ದಾರೆ.
`ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಸಂಘಟಿತ ದಾಳಿ ನಡೆದಿದೆ. ಗುಂಡಾ ವರ್ತನೆ ತೋರಿದವರ ವಿರುದ್ಧ ಶಿಸ್ತು ಕ್ರಮವಾಗಬೇಕು’ ಎಂದವರು ಒತ್ತಾಯಿಸಿದ್ದಾರೆ. `ಧರ್ಮಸ್ಥಳ ಎಂಬ ಊರಿನಲ್ಲಿ ನಡೆದ ಅಸಹಜ ಸಾವು, ಭೂ ಕಬಳಿಕೆ ವಿಚಾರವಾಗಿ ಸರ್ಕಾರ ಗಮನಹರಿಸಿ ವಿಶೇಷ ತನಿಖಾದಳ ರಚಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿರುವಾಗ ಅದನ್ನು ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಲು ಹೋದವರ ಮೇಲೆ ಹಲ್ಲೆ ನಡೆದಿದೆ. ಸಾಂಸ್ಕೃತಿಕ ನಂಟು ಹೊಂದಿದ ಕ್ಷೇತ್ರಕ್ಕೆ ಇದು ಅಪಮಾನ’ ಎಂದವರು ಪ್ರತಿಕ್ರಿಯಿಸಿದ್ದಾರೆ.
`ಮಾಧ್ಯಮಗಳ ವರದಿಯಿಂದ ಕೆಲವರು ಭಯಭೀತರಾಗಿ ದಾಂಧಲೆ ನಡೆಸಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಪಾಳೆಯಗಾರಿ ಕ್ರೌರ್ಯದ ವಿರುದ್ಧ ಹೋರಾಟ ನಡೆಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕಾ ಅಧ್ಯಕ್ಷ ದೇವಾನಂದರ ಮಗಳಾದ ಪದ್ಮಲತಾ ಹಾಗೂ ಸೌಜನ್ಯಾ, ವೇದವಲ್ಲಿ ಮುಂತಾದವರ ಕೊಲೆ ಪ್ರಕರಣಗಳ ಮರುತನಿಖೆ ನಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
