ಶಿರೂರು (Shiruru) ಗುಡ್ಡ ಕುಸಿತದಿಂದ ಊರಿಗೇ ಊರೇ ನಾಶವಾದ ಉಳುವರೆ ಜನ ತಮಗೆ ಭೂಮಿ ನೀಡುವಂತೆ ಎಲ್ಲಿಯೂ ಅಂಗಲಾಚಿಲ್ಲ. ಅದಾಗಿಯೂ ಸಚಿವ ಮಂಕಾಳು ವೈದ್ಯ ಗೋಕರ್ಣದ ಗಡಿಭಾಗವಾದ ದೇವಿಗದ್ದೆ ಗ್ರಾಮದಲ್ಲಿ 38 ಗುಂಟೆ ಜಾಗ ಗುರುತಿಸುವುದಾಗಿ ಹೇಳಿಕೆ ನೀಡಿದ್ದು, ಅಲ್ಲಿನವರ ಆತಂಕಕ್ಕೆ ಕಾರಣವಾಗಿದೆ. ಜಾಗ ನೀಡುವ ಬದಲು ಮನೆ ನಿರ್ಮಾಣಕ್ಕೆ ನೆರವು ನೀಡಿ ಎಂದು ಅವರು ಬೇಡಿಕೆ ಸಲ್ಲಿಸಿದ್ದಾರೆ.
ಉಳುವರೆಯಲ್ಲಿ ಹಾಲಕ್ಕಿ ಒಕ್ಕಲಿಗರು ಹಾಗೂ ಮೀನುಗಾರರು ಈ ಭಾಗದಲ್ಲಿ ವಾಸವಾಗಿದ್ದರು. ನದಿ ಅಂಚಿಗೆ ಇರುವುದರಿಂದ ಮೀನುಗಾರರಿಗೆ ಗಂಗಾವಳಿ ನದಿಯಲ್ಲಿಯೇ ಮೀನುಗಾರಿಕೆ ನಡೆಸಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಹಾಗೇ ಹಾಲಕ್ಕಿ ಒಕ್ಕಲಿಗರು ಮೂಲತಃ ಕೃಷಿಕರಾಗಿದ್ದು, ಈ ಭಾಗದಲ್ಲಿಯ ತಮ್ಮ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಇವರಿಗೆ 4 ಕಿ.ಮೀ ದೂರದಲ್ಲಿ ಜಾಗ ನೀಡುವುದಾಗಿ ಸಚಿವರು ಹೇಳಿದ್ದಾರೆ. ಆದರೆ ಜಾಗ ನೀಡುವ ಬದಲು `ಮನೆ ನಿರ್ಮಾಣಕ್ಕೆ 10 ಲಕ್ಷ ರೂ ನೆರವು ನೀಡಿ, ಇಲ್ಲವಾದಲ್ಲಿ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಡಿ\’ ಎಂಬ ಬೇಡಿಕೆ ಅಲ್ಲಿನವರದ್ದು. ಅದನ್ನು ಬಿಟ್ಟು ದೂರದ ಸ್ಥಳಕ್ಕೆ ಸ್ಥಳಾಂತರಿಸಿದರೆ ಇಲ್ಲಿನ ಭೂಮಿ ಬಂಜರು ಬೀಳುವ ಆತಂಕ ಅವರಲ್ಲಿದೆ.
ಇಲ್ಲಿನವರನ್ನು ಬೇರೆ ಊರಿಗೆ ಸ್ಥಳಾಂತರಿಸಿದರೆ ಕೃಷಿ ಜೊತೆ ಅವರ ಮೀನುಗಾರಿಕೆಯ ಮೇಲೆಯೂ ಪೆಟ್ಟು ಬೀಳಲಿದೆ. ಇದರಿಂದ ಅವರ ಬದುಕು ಇನ್ನಷ್ಟು ಛಿದ್ರವಾಗುವ ಸಾಧ್ಯತೆಯಿದೆ. ಅನಾದಿ ಕಾಲದಿಂದಲೂ ಎರಡು ಸಮುದಾಯದವರು ಮಾಡಿಕೊಂಡು ಬಂದಿರುವ ತಮ್ಮ ಕುಲಕಸುಬನ್ನು ಬಿಡಲು ಸಿದ್ಧರಿಲ್ಲ. ಹೀಗಾಗಿ ನಷ್ಟಕ್ಕೆ ಆದ ಪರಿಹಾರ ಮಾತ್ರ ಒದಗಿಸಿದರೆ ಸಾಕು ಎಂಬುದು ಅಲ್ಲಿನವರ ಅಭಿಪ್ರಾಯ.