ಯಲ್ಲಾಪುರ ತಾಲೂಕಿನ ನಾಯ್ಕನಕೆರೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮುಂದಾಳತ್ವದಲ್ಲಿ ದತ್ತಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಡಿಸೆಂಬರ್ 14ರ ದತ್ತ ಜಯಂತಿ ದಿನ ಈ ಮಂದಿರ ಲೋಕಾರ್ಪಣೆಯಾಗಲಿದೆ.
`ಶ್ರೀರಾಮನ ಆರಾಧಕರಾದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ನಾಮಬಲದಿಂದ ಎಲ್ಲವೂ ಅಂದುಕೊ0ಡ0ತೆ ನಡೆದರೆ ಇಲ್ಲಿ ದೇಗುಲದ ಜೊತೆ ಹಂತ ಹಂತವಾಗಿ ಕಲ್ಯಾಣ ಮಂಟಪ, ಪಾಠಶಾಲೆ, ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಹಾಗೂ ಭಕ್ತರ ಭಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಇನ್ನಿತರ ಕಟ್ಟಡಗಳ ನಿರ್ಮಾಣವೂ ಆಗಲಿದೆ. ಕೆರೆ ಅಂಚಿನಲ್ಲಿರುವ ಈ ದೇಗುಲಕ್ಕೆ ಯಾವುದೇ ಅಪಾಯ ಆಗಬಾರದು ಎಂದು ನಿರ್ಧರಿಸಿ 17 ಅಡಿ ತಳಭಾಗದಿಂದ ವೃತ್ತಾಕಾರವಾಗಿ ಕಲ್ಲಿನ ಪೌಂಡೇಶನ್ ಕಟ್ಟಲಾಗಿದೆ. ಹಗಲು ರಾತ್ರಿ ಎನ್ನದೇ ಕಾರ್ಮಿಕರು ಮಂದಿರ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ\’ ಎಂದು ದೇಗುಲ ಸಮಿತಿಯವರು ಸುದ್ದಿಗಾರರಿಗೆ ತಿಳಿಸಿದರು.

ದೇಗುಲ ನಿರ್ಮಾಣ ಸಮಿತಿಗೆ ಹಂಡ್ರಮನೆ ಗೋಪಾಲಕೃಷ್ಣ ಭಟ್ಟರು ಅಧ್ಯಕ್ಷರು. ಶ್ರೀರಂಗ ಕಟ್ಟಿ, ಹರಿಪ್ರಕಾಶ ಕೋಣೆಮನೆ, ನಾಗೇಶ ಯಲ್ಲಾಪುರ ಉಪಾಧ್ಯಕ್ಷರಾಗಿ ಜವಾಬ್ದಾರಿವಹಿಸಿಕೊಂಡಿದ್ದಾರೆ. ಶಾಂತಾರಾಮ ಹೆಗಡೆ ಕಾರ್ಯದರ್ಶಿಗಳಾಗಿದ್ದು, ಪ್ರಶಾಂತ ಹೆಗಡೆ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ ಟಿ ಭಟ್ಟ ಈ ಸಮಿತಿಯ ನಿರ್ದೇಶಕರು. ಒಟ್ಟು 26 ಜನ ಸಮಿತಿಯಲ್ಲಿದ್ದು, ಎಲ್ಲಾ ಸಮುದಾಯದ ಎಲ್ಲಾ ಪ್ರದೇಶದ ಜನರು ಮಂದಿರ ನಿರ್ಮಾಣದ ಸೇವೆಯಲ್ಲಿದ್ದಾರೆ.
`ಒಟ್ಟು 3 ಕೋಟಿ ರೂ ವೆಚ್ಚದಲ್ಲಿ ಈ ಎಲ್ಲಾ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಪ್ರಸ್ತುತ 1 ಕೋಟಿ ರೂ ವೆಚ್ಚದಲ್ಲಿ ಮಂದಿರ ನಿರ್ಮಿಸಲಾಗುತ್ತದೆ. ಹಳೆಯ ಮಂದಿರವನ್ನು ಹಿತ್ಲಳಿಯ ಬ್ರಹ್ಮಾನಂದ ಗಣೇಶ ಯೋಗಿಗಳು ನಿರ್ಮಿಸಿದ್ದು, ಅವರು ಇಲ್ಲಿ ತಪಸ್ಸು ಮಾಡಿದ್ದರು. ಅವಧೂತರಾದ ಶಿವಾನಂದ ಯೋಗಿಗಳು ತಪಸ್ಸು ಮಾಡಿದ್ದರು. ಅವರ ಸಮಾಧಿ ಇದೇ ಪುಣ್ಯಭೂಮಿಯಲ್ಲಿದೆ. ಪ್ರಸ್ತುತ ರಾಘವೇಶ್ವರ ಭಾರತೀ ಶ್ರೀಗಳು ದೇಗುಲದ ಪುನರ್ ನಿರ್ಮಾಣ ಸಂಕಲ್ಪಿಸಿದ್ದಾರೆ\’ ಎಂದು ಸಮಿತಿಯವರು ವಿವರಿಸಿದರು.
`ಖ್ಯಾತ ಶಿಲ್ಪಿ ಸುರಾಲು ವೆಂಕಟ್ರಮಣ ಭಟ್ಟ ಹಾಗೂ ಖ್ಯಾತ ವಾಸ್ತು ತಜ್ಞ ಮಹೇಶ ಮುನಿಯಂಗಳ ಕಟ್ಟಡ ರಚನೆಗೆ ಸಹಕಾರ ನೀಡಿದ್ದಾರೆ. ಈಗಾಗಲೇ 25 ಲಕ್ಷ ರೂ ಮೌಲ್ಯದ ಕಲ್ಲುಗಳು ಸ್ಥಳಕ್ಕೆ ಬಂದಿದ್ದು, ಕೆತ್ತನೆ ಕಾರ್ಯ ನಡೆಯುತ್ತಿದೆ. ಇಡೀ ದೇವಾಲಯ ಶಿಲೆಗಳಿಂದ ಕೂಡಿರುತ್ತದೆ\’ ಎಂದು ದೇಗುಲದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.