ಉತ್ತರ ಕನ್ನಡ ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆಗೆ ( Areca ) ಈ ಬಾರಿ ಭಾರೀ ಪ್ರಮಾಣದಲ್ಲಿ ಕೊಳೆ ರೋಗ ಬಂದಿದೆ. ಅಡಿಕೆಗೆ ಹಬ್ಬಿದ ಕೊಳೆರೋಗ ಕಾಳು ಮೆಣಸಿನ ಬಳ್ಳಿಯ ಮೇಲೆಯೂ ದುಷ್ಪರಿಣಾಮ ಬೀರಿದೆ. ಈ ಬಗ್ಗೆ ತೋಟಗಾರಿಕಾ ಅಧಿಕಾರಿಗಳು ಸರ್ಕಾರಕ್ಕೆ ಅಂಕಿ-ಸ0ಖ್ಯೆಗಳ ಜೊತೆ ಮಾಹಿತಿ ನೀಡಿದ್ದು, ಕೊಳೆ ರೋಗಕ್ಕೆ ಯೋಗ್ಯ ಪರಿಹಾರ ನೀಡುವ ಬಗ್ಗೆ ಈವರೆಗೂ ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ.
ಎಲ್ಲಾ ತಾಲೂಕಿನ ತೋಟಗಾರಿಕಾ ಅಧಿಕಾರಿಗಳು ಕೊಳೆ ರೋಗದ ಬಗ್ಗೆ ಮಾಹಿತಿ ನೀಡುವಂತೆ ಬೆಳಗಾರರಿಗೆ ಮನವಿ ಮಾಡಿದ್ದಾರೆ. ಅವರು ನೀಡಿರುವ ಮಾಹಿತಿಯನ್ನು ಮೇಲಧಿಕಾರಿಗಳಿಗೆ ಸಹ ಸಲ್ಲಿಸಿದ್ದಾರೆ. ಅನೇಕ ಕಡೆ ಅಧಿಕಾರಿಗಳೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೋಗ ಹರಡುವಿಕೆ ತಡೆಗೆ ವಿವಿಧ ಸಲಹೆಗಳನ್ನು ಸಹ ನೀಡಿದ್ದಾರೆ.
ಶಿರಸಿ ಮುಂಡಗನಮನೆ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸೊಸೈಟಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಡಿಕೆ ಕೊಳೆ ರೋಗದ ಕುರಿತು ಸಮೀಕ್ಷೆ ನಡೆಸಿದಾಗ ಅಡಿಕೆ ಜೊತೆ ಕಾಳು ಮೆಣಸಿಗೂ ರೋಗ ತಗುಲಿರುವುದು ಕಾಣಿಸಿದೆ. ಬಹುತೇಕ ಎಲ್ಲ ರೈತರ ತೋಟಗಳಿಗೂ ಕೊಳೆರೋಗ ಬಾಧಿಸಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಅಧಿಕಾರಿಗಳು ರೈತರಿಗೆ ಆಶ್ವಾಸನೆ ನೀಡಿದರು.