`ಲಕ್ಕಿ ಡ್ರಾ’ ಲಾಟರಿಯನ್ನು ಸರ್ಕಾರ ನಿಷೇಧಿಸಿದರೂ ದೇವರ ಹೆಸರಿನಲ್ಲಿ ಮೋಸ ಮಾಡಲು ಯತ್ನಿಸಿದವನ ವಿರುದ್ಧ ಮುರುಡೇಶ್ವರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಮುರುಡೇಶ್ವರ ದೇವಾಲಯದ ಫೋಟೋ ದುರ್ಬಳಕೆ ಮಾಡಿದ ಕಾರಣ ದೇಗುಲದ ಮ್ಯಾನೇಜರ್ ಮಂಜುನಾಥ ಶೆಟ್ಟಿ ದೂರು ನೀಡಿದ್ದಾರೆ.
ಅಗಷ್ಟ 6ರಿಂದ ಅಗಷ್ಟ 8ರವರೆಗೆ ಮುರುಡೇಶ್ವರ ದೇವಸ್ಥಾನದ ಫೋಟೋ ಬಳಸಿದ ವ್ಯಕ್ತಿಯೊಬ್ಬ `ಲಕ್ಕಿ ಡ್ರಾ’ ಯೋಜನೆ ಘೋಷಿಸಿದ್ದ. ಒಟ್ಟು 501 ಬಹುಮಾನವಿರುವುದಾಗಿ ಆತ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದು, ಪ್ರತಿ ಟಿಕೆಟ್’ಗೆ 299ರೂ ನಿಗದಿ ಮಾಡಿದ್ದ. ದೇವಾಲಯದಿಂದಲೇ ಈ ಯೋಜನೆ ಜಾರಿಯಾಗಿರುವಂತೆ ಬಿಂಬಿಸಿದ ಕಾರಣ ಜನ ಮುಗಿಬಿದ್ದು ಟಿಕೆಟ್ ಖರೀದಿಸಿದ್ದರು.
ಮುರುಡೇಶ್ವರದ ಹೆಸರಿನಲ್ಲಿ ವಂಚನೆ ನಡೆಯುತ್ತಿರುವುದನ್ನು ಭಕ್ತರು ಸಹಿಸಲಿಲ್ಲ. ಈ ಬಗ್ಗೆ ಭಕ್ತರು ದೇಗುಲ ಸಮಿತಿಯವರ ಗಮನಕ್ಕೆ ತಂದಿದ್ದು, ಮಂಜುನಾಥ ಶೆಟ್ಟಿ ಅವರು ಲಕ್ಕಿ ಡ್ರಾ ನೋಡಿ ಕಂಗಾಲಾದರು. ಕೂಡಲೇ ಅವರು ಅಲ್ಲಿನ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದರು.
