ಗ್ಯಾರಂಟಿ ಯೋಜನೆಗಳ ಪ್ರಚಾರದಲ್ಲಿ `ಹಸಿವು ಮುಕ್ತ ಕರ್ನಾಟಕ’ ಎಂದು ಸಾರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನು ಸಮರ್ಫಕವಾಗಿ ಫಲಾನುಭವಿಗೆ ತಲುಪಿಸುವಲ್ಲಿ ವಿಫಲವಾಗಿದೆ. ಯಲ್ಲಾಪುರದ ಆನಗೋಡಿನಲ್ಲಿ ವಾಸವಾಗಿದ್ದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಹಸಿವು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಷಯವನ್ನು ಅಧಿವೇಶನದಲ್ಲಿ ಚರ್ಚಿಸಲು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಸಿದ್ಧತೆ ನಡೆಸಿದ್ದಾರೆ.
ಆನಗೋಡಿನ ಬೆಲ್ತಾರಗದ್ದೆಯಲ್ಲಿದ್ದ ಲಕ್ಷ್ಮೀ ಸಿದ್ದಿ ಅವರು ಅಗಷ್ಟ 2ರಂದು ಮೈಮೇಲೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆಸ್ಪತ್ರೆಗೆ ದಾಖಲಾದರೂ ಅವರು ಬದುಕಲಿಲ್ಲ. ಸತ್ಯ ಶೋಧನೆ ವೇಳೆ ಅವರು ಅಡುಗೆ ಮಾಡಲು ಮನೆಯಲ್ಲಿ ಸಾಮಗ್ರಿ ಇಲ್ಲದ ಕಾರಣ ಸಾವನಪ್ಪಿರುವುದು ಗಮನಕ್ಕೆ ಬಂದಿತ್ತು. ಪುತ್ರಿ ಮಂಗಲಾ ಸಿದ್ದಿ ಅವರ ಬಳಿಯೂ ಸಾವಿನ ಮುನ್ನ ಲಕ್ಷ್ಮೀ ಸಿದ್ದಿ ಅವರು ಅಡುಗೆ ಮಾಡಲು ಅಕ್ಕಿ ಇಲ್ಲದ ಬಗ್ಗೆ ಮಾತನಾಡಿದ್ದರು. ಲಕ್ಷ್ಮೀ ಸಿದ್ದಿ ಅವರ ಬಳಿ ಆಧಾರ್ ಕಾರ್ಡ-ರೇಶನ್ ಕಾರ್ಡ ಸಹ ಇಲ್ಲದ ಕಾರಣ ಅವರಿಗೆ ಪಡಿತರ ಸಿಗುತ್ತಿರಲಿಲ್ಲ.
ರೇಶನ್ ಕಾರ್ಡಿನಲ್ಲಿ ಮಕ್ಕಳ ಹೆಸರು ಇಲ್ಲ!
ಶನಿವಾರ ಶಾಂತರಾಮ ಸಿದ್ದಿ ಅವರ ನಿಯೋಗ ಆನಗೋಡಿಗೆ ಭೇಟಿ ನೀಡಿದ್ದು, ಲಕ್ಷ್ಮೀ ಸಿದ್ದಿ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಲಕ್ಷ್ಮೀ ಸಿದ್ದಿ ಅವರ ಮಕ್ಕಳ ಹೆಸರು ಸಹ ರೇಶನ್ ಕಾರ್ಡಿನಲ್ಲಿ ಇಲ್ಲದರಿವುದು ಗಮನಕ್ಕೆ ಬಂದಿತು. ಲಕ್ಷ್ಮೀ ಸಿದ್ದಿ ಅವರ ಮಕ್ಕಳು ಮಾತ್ರವಲ್ಲ, ಅವರ ಮೊಮ್ಮಕ್ಕಳ ಹೆಸರು ಸಹ ರೇಶನ್ ಕಾರ್ಡಿನಲ್ಲಿರಲಿಲ್ಲ. ಹೀಗಾಗಿ ಅವರು ಸರ್ಕಾರ ನೀಡುವ ಪಡಿತರ ವ್ಯವಸ್ಥೆಯಿಂದ ವಂಚಿತರಾಗಿದನ್ನು ಶಾಂತರಾಮ ಸಿದ್ದಿ ಅವರು ಗಮನಿಸಿದರು.
ಅದಾದ ನಂತರ ಯಲ್ಲಾಪುರಕ್ಕೆ ಆಗಮಿಸಿ ತುರ್ತು ಸುದ್ದಿಗೋಷ್ಠಿ ನಡೆಸಿದ ಶಾಂತರಾಮ ಸಿದ್ದಿ `ಆ ಕುಟುಂಬದವರಿಗೆ ಸರ್ಕಾರಿ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡಿದ್ದು, ಅದನ್ನು ಪಾಲಿಸಲು ಬದ್ಧ’ ಎಂದು ಘೋಷಿಸಿದರು. `ಮೃತರ ಮನೆಗೆ ತಾನು ಭೇಟಿ ನೀಡಿದಾಗ ಅವರ ಬಳಿ ಇನ್ನೂ ಆಧಾರ್ ಕಾರ್ಡ್, ಪಡಿತರ ಚೀಟಿಗಳು ಇತ್ಯಾದಿ ದಾಖಲೆಗಳು ಇರಲಿಲ್ಲ. ಸರ್ಕಾರದ ಯಾವ ಸೌಲಭ್ಯಗಳೂ ಅವರಿಗೆ ಸಿಗುತ್ತಿರಲಿಲ್ಲ ಎಂದು ಅರಿವಾಗಿದೆ. ಸರ್ಕಾರ ನಿಜವಾಗಿ ಬಡವರ ಪರವಾಗಿ ಇದ್ದರೆ ಬುಡಕಟ್ಟು ಸಮುದಾಯದ ಮಹಿಳೆಗೆ ಇಂತಹ ದುಃಸ್ಥಿತಿ ಬರುತ್ತಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ತಲುಪಿಸುತ್ತಿದ್ದೇವೆ ಎಂದು ಸರ್ಕಾರ ಪ್ರಚಾರ ಮಾಡಿಕೊಳ್ಳುತ್ತಿದೆ. ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ನೇಮಿಸಿದ ಸಮಿತಿಗಳು ಏನು ಮಾಡುತ್ತಿವೆ ‘ ಎಂದು ಶಾಂತರಾಮ ಸಿದ್ದಿ ಪ್ರಶ್ನಿಸಿದರು. `ಪರಿಶಿಷ್ಟರಿಗಾಗಿ ಮೀಸಲಿಡುವ ಅನುದಾನವನ್ನು ಬೇರೆ ಕಡೆ ವರ್ಗಾಯಿಸಲಾಗುತ್ತಿದೆ. ಅದನ್ನು ಸರಿಯಾಗಿ ಸಮುದಾಯಕ್ಕೇ ನೀಡಿದರೆ ಇಂತಹ ಸ್ಥಿತಿ ಬರುತ್ತಿರ’ ಎಂದವರು ಹೇಳಿದರು.
ಶಾಂತರಾಮ ಸಿದ್ಧಿ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ್, ಪ್ರಮುಖರಾದ ಕೆ ಟಿ ಹೆಗಡೆ, ರವಿ ದೇವಡಿಗ, ಸೋಮು ನಾಯ್ಕ ಇದ್ದರು.
