`ಯಲ್ಲಾಪುರದ ಲಕ್ಷ್ಮೀ ಸಿದ್ಧಿ ಹಸಿವಿನಿಂದ ಸಾವನಪ್ಪಿಲ್ಲ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸ್ಪಷ್ಟನೆ ಹೇಳಿದ್ದಾರೆ.
`ಲಕ್ಷ್ಮೀ ಸಿದ್ದಿ ಅವರು ವೈಯಕ್ತಿಕ ಕಾರಣದಿಂದ ಒಂದು ಕಡೆ ಸ್ಥಿರವಾಗಿ ವಾಸವಾಗಿರಲಿಲ್ಲ. ಅವರಿಗೆ ಮಕ್ಕಳಿದ್ದರೂ ಕುಟುಂಬದ ಜೊತೆ ವಾಸವಾಗಿರಲಿಲ್ಲ’ಎಂದವರು ಅಧೀನ ಅಧಿಕಾರಿಗಳಿಂದ ಮಾಹಿತಿಪಡೆದು ಪ್ರಕಟಣೆ ನೀಡಿದ್ದಾರೆ.
`ಪಾಲಕರು ವಾಸವಾಗಿದ್ದ ಮನೆ ಬಳಿ ಲಕ್ಷ್ಮೀ ಸಿದ್ದಿ ಗುಡಿಸಲು ಕಟ್ಟಿಕೊಂಡು ಪ್ರತ್ಯೇಕವಾಗಿ ವಾಸವಾಗಿದ್ದು, ತಂದೆ-ತಾಯಿಯಿದ್ದ ಮನೆಗೆ ಬಂದು ಊಟ ಮಾಡುತ್ತಿದ್ದರು. ಅವರ ತಂದೆ-ತಾಯಿ ಅವರಿಗೆ ಅನ್ನಭಾಗ್ಯ ಯೋಜನೆ ಹಾಗೂ ಸಿದ್ದಿ ಸಮುದಾಯಕ್ಕೆ ನೀಡುವ ಆಹಾರ ಕಿಟ್ ವಿತರಣೆಯಾಗಿದೆ’ ಎಂದು ಲಕ್ಷ್ಮೀಪ್ರಿಯಾ ಸ್ಪಷ್ಟನೆ ನೀಡಿದ್ದಾರೆ.
`ಲಕ್ಷ್ಮೀ ಸಿದ್ಧಿ ಅವರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ’ ಎಂದವರು ವಿವರಿಸಿದ್ದಾರೆ.
