`ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣ’ದಲ್ಲಿ ಬುರುಡೆ ಭೀಮನ ಭವಿಷ್ಯ ಸುಳ್ಳಾಗಿದೆ. ಹೀಗಾಗಿ
ಒಂದು ಹಂತದಲ್ಲಿ ಶಿರಸಿ ಗ್ರಾಮಾಂತರ ಪೊಲೀಸ್ ಇನ್ಸಪೆಕ್ಟರ್ ಮಂಜುನಾಥ ಗೌಡ ಅವರ ಮೇಲಿದ್ದ ಆರೋಪವೂ ದೂರವಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಅನಾಮಿಕನೊಬ್ಬ ಸರ್ಕಾರವನ್ನು ನಂಬಿಸಿದ ಪರಿಣಾಮ ಸರ್ಕಾರ ವಿಶೇಷ ತನಿಖಾ ದಳ ರಚಿಸಿತ್ತು. ಸ್ಥಳ ಶೋಧ ನಡೆಸಿದಾಗ ದೂರುದಾರನ ಮಾಹಿತಿಗಳ ಪ್ರಕಾರ ಶವ ಹೂತ ಸುಳಿವು ಸಿಗಲಿಲ್ಲ. ಈ ನಡುವೆ ವಿಶೇಷ ತನಿಖಾ ದಳದ ತಂಡದಲ್ಲಿದ್ದ ಪೊಲೀಸ್ ಇನ್ಸಪೆಕ್ಟರ್ ಮಂಜುನಾಥ ಗೌಡ ಅನಾಮಿಕ ದೂರುದಾರನ ಮೇಲೆ ಒತ್ತಡ ಹೇರಿದ ಆರೋಪ ಎದುರಿಸಿದ್ದರು. ದೂರುದಾರ ಪರ ವಕೀಲರು ಈ ಬಗ್ಗೆ ತನಿಖಾ ದಳದ ಮುಖ್ಯಸ್ಥರಿಗೆ ದೂರು ನೀಡಿದ್ದರು.
`ನೀನು ದೂರು ನೀಡಿದ ಕಾರಣ ನಿನಗೆ ಶಿಕ್ಷೆಯಾಗುತ್ತದೆ. ದೂರು ಹಿಂಪಡಯದೇ ಇದ್ದಲ್ಲಿ ನಿನ್ನನ್ನು ಪೊಲೀಸರು ಬಂಧಿಸಲಿದ್ದಾರೆ. ಜೀವಮಾನವಿಡೀ ಜೈಲಿನಲ್ಲಿರಬೇಕಾಗುತ್ತದೆ’ ಎಂದು ಮಂಜುನಾಥ ಗೌಡ ಅವರು ಬೆದರಿಸಿದ ಬಗ್ಗೆ ಆರೋಪಿಸಲಾಗಿತ್ತು. ವಿವಿಧ ಯೂಟೂಬ್ ಚಾನಲ್ ಹಾಗೂ ಜಾಲತಾಣಗಳಲ್ಲಿ ಮಂಜುನಾಥ ಗೌಡ ಅವರಿಗೆ `ಈ ಬೆದರಿಕೆ ಒಡ್ಡಲು ಸೂಚಿಸಿದವರು ಯಾರು? ಆ ಬಗ್ಗೆ ತನಿಖೆ ನಡೆಯಬೇಕು’ ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ, ದೂರುದಾರರ ಬೇಡಿಕೆಯ ಪ್ರಕಾರ ಶೋಧ ನಡೆದರೂ ಅಲ್ಲಿ ನೂರಾರು ಶವ ಹೂತ ಸಾಕ್ಷಿ ಸಿಗಲಿಲ್ಲ. ಹೀಗಾಗಿ ಇಡೀ ಪ್ರಕರಣವೇ ತಲೆಕೆಳಗಾಗಿದ್ದು, ಧರ್ಮಸ್ಥಳಕ್ಕೆ ಅಂಟಿದ ಕಳಂಕದ ಜೊತೆ ಮಂಜುನಾಥ ಗೌಡರಿಗೆ ತಾಗಿದ್ದ ಕಳಂಕವೂ ಕ್ರಮೇಣ ದೂರವಾಗಿದೆ.
ಮಂಜುನಾಥ ಗೌಡ ಅವರು ಸರ್ಕಾರ ಸೂಚಿಸಿದ ಕೆಲಸವನ್ನು ಮಾಡುವುದಕ್ಕಾಗಿ ಧರ್ಮಸ್ಥಳಕ್ಕೆ ಹೋಗಿದ್ದು, ತಮ್ಮ ಮೇಲೆ ಆರೋಪ ಬಂದ ನಂತರ ತಟಸ್ಥ ನಿಲುವು ತೋರಿದ್ದರು. ಮರುದಿನದ ಕಾರ್ಯಾಚರಣೆಯಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ನೇತ್ರಾವತಿ ನದಿ ಬಳಿ ಶೋಧ ಕಾರ್ಯಾಚರಣೆ ನಡೆಯುವ ವೇಳೆ ದೂರುದಾರನಿಗೆ ಪೊಲೀಸ್ ಇನ್ಸಪೆಕ್ಟರ್ ಬೆದರಿಕೆ ಒಡ್ಡಿದ ಬಗ್ಗೆ ದೂರುದಾರನ ಪರ ವಕೀಲರು ಮೇಲಧಿಕಾರಿಗಳಿಗೆ ಇಮೇಲ್ ಮಾಡಿದ್ದು, ಅದರಲ್ಲಿಯೂ ಮೇಲಾಧಿಕಾರಿಗಳಿಗೆ ಸತ್ಯಾಂಶ ಸಿಗುತ್ತಿಲ್ಲ.
`ಮಂಜುನಾಥ ಸ್ವಾಮಿಯನ್ನು ನಂಬದವರು ಮಂಜುನಾಥ ಗೌಡರ ಮೇಲೆ ನಂಬಿಕೆಯಿಡದೇ ಆರೋಪ ಮಾಡಿರುವುದು ಸಹಜ. ಮಂಜುನಾಥ ಗೌಡರನ್ನು ಆ ಮಂಜುನಾಥ ಸ್ವಾಮಿಯೇ ಕಾಪಾಡಿದ್ದಾನೆ’ ಎನ್ನುವ ಬಗ್ಗೆ ಇದೀಗ ಚರ್ಚೆ ನಡೆದಿದೆ.
