ಅಮೇರಿಕಾ ಪ್ರವಾಸ ಮುಗಿಸಿ ಶಿರಸಿಗೆ ಮರಳಿರುವ ಶಾಸಕ ಭೀಮಣ್ಣ ನಾಯ್ಕ ಅವರು ಸುರಕ್ಷಿತವಾಗಿ ಶಿರಸಿಗೆ ಮರಳಿದ್ದು, ಅಮೇರಿಕಾದ ಅನುಭವಗಳನ್ನು ರಸವತ್ತಾಗಿ ಹಂಚಿಕೊoಡಿದ್ದಾರೆ. ಸಭೆ-ಸಮಾರಂಭದ ಜೊತೆ ಮರುಭೂಮಿ, ನದಿ, ಹೆಲಿಕಾಪ್ಟರ್ ಹಾರಾಟದ ಅನುಭವಗಳ ಬಗ್ಗೆ ಅವರು ಮಾಧ್ಯಮದವರ ಮುಂದೆ ವಿವರಿಸಿದ್ದಾರೆ.
ಅಮೇರಿಕಾದಲ್ಲಿನ ಕೃಷಿ, ವಾಣಿಜ್ಯ, ಶಿಕ್ಷಣ, ಅಭಿವೃದ್ಧಿ, ನೀರಾವರಿ ವಿಷಯದ ಕುರಿತು ಅಧ್ಯಯನ ನಡೆಸಿರುವುದಾಗಿ ಭೀಮಣ್ಣ ನಾಯ್ಕ ಅವರು ಹೇಳಿಕೊಂಡಿದ್ದು, ಅಲ್ಲಿನ ಶಿಕ್ಷಣ ಪದ್ಧತಿಯ ಬಗ್ಗೆ ಅಚ್ಚರಿವ್ಯಕ್ತಪಡಿಸಿದರು. ಅಮೇರಿಕಾದ ವಿಶ್ವವಿದ್ಯಾಲಯವೊಂದಕ್ಕೆ ಭೇಟಿ ನೀಡಿದಾಗ ಅಲ್ಲಿ ಶೇ 40ರಷ್ಟು ಉಪನ್ಯಾಸಕರು ಕನ್ನಡದವರಾಗಿದ್ದರು ಎಂಬ ಸ್ವಾರಸ್ಯಕರ ವಿಷಯವನ್ನು ತೆರೆದಿಟ್ಟರು. ಜೊತೆಗೆ ಅವರಿಗೆ `ಮರಳಿ ಭಾರಕ್ಕೆ ಬನ್ನಿ’ ಎಂದು ಆಮಂತ್ರಣ ನೀಡಿರುವುದಾಗಿ ತಿಳಿಸಿದರು.
`ಅಧೀವೇಶನಕ್ಕೆ ಹಾಜರಾದ ಹಾಜರಾತಿ ಗಮನಿಸಿ ಶಾಸಕರನ್ನು ಅಮೇರಿಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು. ನಮ್ಮನ್ನು ಸುರಕ್ಷಿತವಾಗಿ ಕರೆದೊಯ್ದು ಸುರಕ್ಷಿತವಾಗಿ ಊರಿಗೆ ಮುಟ್ಟಿಸಿದ್ದಾರೆ. ಈ ಪ್ರವಾಸ ಸಾಕಷ್ಟು ಅಧ್ಯಯನಕ್ಕೆ ಸಹಕಾರಿಯಾಗಿದೆ’ ಎಂದು ಭೀಮಣ್ಣ ನಾಯ್ಕ ಹೇಳಿದರು. `20 ಎಕರೆ ವಿಶಾಲವಾದ ಭವನದಲ್ಲಿ ಸಭೆ ನಡೆಯಿತು. 9 ಸಾವಿರ ಜನರಿಗೆ ಅಲ್ಲಿ ಆಸನ ವ್ಯವಸ್ಥೆ ಮಾಡಲಾಗಿದ್ದು, ಮೊದಲು ತೆರಳಿದರೂ ನಮಗೆ ಮುಂದಿನ ಸಾಲು ಸಿಗಲಿಲ್ಲ. ಸಭೆ ಶುರುವಾದಾಗ ಭವನದ ತುಂಬ ಜನ ಸೇರಿದ್ದು, ವಿಶ್ವದ ಎಲ್ಲಾ ಭಾಗದ ಜನಪ್ರತಿನಿಧಿಗಳು ಬಂದಿದ್ದರು. ನಮ್ಮಲ್ಲಿರುವ ಪದ್ಧತಿಯ ಹಾಗೇ ಅಮೇರಿಕಾದ ಸಭಾ ಕಾರ್ಯಕ್ರಮಗಳಲ್ಲಿ ಸ್ವಾಗತ ಮಾಡುವುದಿಲ್ಲ. ಎಲ್ಲಾ ದೇಶದ ಬಾವುಟವನ್ನು ಪರದೆ ಮೇಲೆ ತೋರಿಸಿದ್ದು, ನಮ್ಮ ದೇಶದ ಬಾವುಟ ಬಂದಾಗ ನಾವು ಭಾವುಕರಾಗಿ ಘೋಷಣೆ ಕೂಗಿದೆವು. ಅದಾದ ನಂತರ ನೇರವಾಗಿ ಸಭೆ ಶುರುವಾಗಿ, ಎರಡು ತಾಸಿನಲ್ಲಿ ಮುಕ್ತಾಯವಾಯಿತು’ ಎಂದು ಅಲ್ಲಿನ ಅಧಿವೇಶನದ ಬಗ್ಗೆ ಮಾಹಿತಿ ನೀಡಿದರು.
`ನಂತರ ವಿವಿಧ ಪ್ರದೇಶಗಳಿಗೆ ನಮ್ಮನ್ನು ಕರೆದೊಯ್ಯಲಾಯಿತು. ಬೇರೆ ಕಡೆಯಿಂದ ನೀರು ತಂದು ಕೃಷಿ ಮಾಡುವುದನ್ನು ತೋರಿಸಲಾಯಿತು. ಕಾರ್ಮಿಕರಿಲ್ಲದೇ ಬರೇ ಯಂತ್ರಗಳಿoದ ಕೃಷಿ ಮಾಡುವುದನ್ನು ಕಾಣಿಸಿದರು. ಭೂಕಂಪ ಆದ ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕ ಕರೆದೊಯ್ದು, ನಂತರ ಆಳದಲ್ಲಿರುವ ನದಿಯಲ್ಲಿ ಬೋಟಿಂಗ್ ಮಾಡಿಸಿದರು. ಆ ನದಿ ನೀರನ್ನು ಬೇರೆ ಕಡೆ ಒಯ್ದು ಅಲ್ಲಿ ವಿಶ್ವದ ದೊಡ್ಡ ಡ್ಯಾಂ ನಿರ್ಮಾಣ ಮಾಡುತ್ತಿರುವುದನ್ನು ಕಾಣಿಸಿದರು’ ಎಂದು ಅಮೇರಿಕಾದಲ್ಲಿ ನೋಡಿದನ್ನು ವಿವರಿಸಿದರು.
`ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಆರ್ಥಿಕ, ರಾಜಕೀಯ, ತ್ಯಾಜ್ಯ ನಿರ್ವಹಣೆ, ಪರಿಸರ, ನೀರು ಸರಬರಾಜು, ಹಳ್ಳಿ ಅಭಿವೃದ್ಧಿ ಕುರಿತು ಶಿಕ್ಷಣ ನೀಡಲಾಗುತ್ತದೆ. ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆಯೂ ಅಲ್ಲಿ ಮಾಹಿತಿ-ಶಿಕ್ಷಣವಿದೆ. ನಮಗೆ ಆಸಕ್ತಿದಾಯಕ ವಿಷಯದ ಬಗ್ಗೆ ಕಲಿಯಲು ಅವಕಾಶವಿದ್ದು, ಯಾರಿಗೆ ಯಾವ ವಿಷಯ ಆಸಕ್ತಿ ಆ ವಿಷಯದ ಕೊಠಡಿಗೆ ಹೋಗಿ ಚರ್ಚೆ ನಡೆಸುವ ಅವಕಾಶ ಕಲ್ಪಿಸಲಾಗಿತ್ತು’ ಎಂದರು. `ಮುಖ್ಯವಾಗಿ ಜಗತ್ತಿನ ಬದಲಾವಣೆ ಹಾಗೂ ಮುಂದಿನ ಜನಾಂಗಕ್ಕೆ ಕೊಡುವ ಕೊಡುಗೆ ಬಗ್ಗೆ ಚರ್ಚೆ ನಡೆಯಿತು’ ಎಂದು ತಿಳಿಸಿದರು.
