ಕಾರವಾರದ ಕದ್ರಾದಲ್ಲಿರುವ ಶೃತಿ ರಾವೋತ್ ಅವರು ನೆರೆಮನೆಯಾಕೆಗೆ 5 ಲಕ್ಷ ರೂ ಸಾಲ ನೀಡಿದ್ದು, ಸಾಲ ನೀಡಿದ ತಪ್ಪಿಗೆ ಹಾದಿ ಬೀದಿಯಲ್ಲಿ ಹೋಗುವವರಿಂದ ಬೈಸಿಕೊಳ್ಳುತ್ತಿದ್ದಾರೆ!
ಶೃತಿ ರಾವುತ್ ಅವರು ಕದ್ರಾದ ಆರ್ ಎಚ್ ಸೆಂಟರ್ ನಿವಾಸಿ. ಅಲ್ಲಿಯೇ ವಾಸವಾಗಿರುವ ಅಪೂರ್ವ ಪೆಡ್ನೇಕರ್ ಅವರು ತುರ್ತಾಗಿ ಹಣದ ಅಗತ್ಯವಿರುವ ಬಗ್ಗೆ ಹೇಳಿದ ಕಾರಣ ಶೃತಿ ಅವರು 5 ಲಕ್ಷ ರೂ ನೀಡಿದ್ದರು. ಮಾನವೀಯ ನೆಲೆಯಲ್ಲಿ ಹಣ ನೀಡಿರುವುದೇ ಇದೀಗ ಅವರ ಸಮಸ್ಯೆಗೆ ಕಾರಣವಾಗಿದೆ.
ಅಗಸ್ಟ 5ರ ಸಂಜೆ ಅಪೂರ್ವ ಪೆಡ್ನೇಕರ್ ಹಾಗೂ ಅವರ ಪತಿ ಆನಂದು ಪೆಡ್ನೇಕರ್ ಶೃತಿ ಅವರ ಮನೆ ಬಳಿ ಬಂದು ಹಣಕಾಸಿನ ವಿಷಯಕ್ಕೆ ಗಲಾಟೆ ಮಾಡಿದ್ದಾರೆ. ಎಲ್ಲರೂ ಕೇಳುವಂತೆ ದೊಡ್ಡದಾಗಿ ಕೆಟ್ಟ ಶಬ್ದದಿಂದ ನಿಂದಿಸಿದ್ದಾರೆ. ಅದಾದ ನಂತರ ಶೃತಿ ರಾವುತ್ ಅವರೇ ತಮಗೆ ಹಣ ಕೊಡಬೇಕು ಎಂದು ಎಲ್ಲಾ ಕಡೆ ಹೇಳಿಕೊಂಡಿದ್ದಾರೆ.
ಪರಿಣಾಮ ಅಲ್ಲಿನ ತಮಿಳು ಕ್ಯಾಂಪ್ ರಸ್ತೆಯಲ್ಲಿ ಓಡಾಡುತ್ತಿದ್ದ ಶೃತಿ ರಾವುತ್ ಅವರಿಗೆ ಪ್ರವೀಣ ನಾಯ್ಕ ಸಹ ಈ ಬಗ್ಗೆ ಪ್ರಶ್ನಿಸಿ, ಹಣ ಮರಳಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಬೆದರಿಕೆಯನ್ನು ಹಾಕಿದ್ದಾರೆ. ಹೀಗಾಗಿ ಶೃತಿ ರಾವುತ್ ಕದ್ರಾ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
