ಯಲ್ಲಾಪುರದ ಬೇಡ್ತಿ ನದಿ ಸೇರುವ ಹಳ್ಳದಲ್ಲಿ ಕೊಚ್ಚಿ ಹೋದ ಸಹೋದರರಿಗಾಗಿ ತೀವೃ ಶೋಧ ನಡೆದಿದ್ದು, ಸೋಮವಾರ ಮಧ್ಯಾಹ್ನ ನೀರಿನ ಆಳದಲ್ಲಿ ಶವವೊಂದು ಸಿಕ್ಕಿದೆ. ನೀರುಪಾಲಾದ ಮತ್ತೊಬ್ಬರಿಗಾಗಿ ಶೋಧ ಮುಂದುವರೆದಿದೆ.
ಭಾನುವಾರ ಬೆಳಗ್ಗೆ ಮಾದನಸರದ ಕವಲಗಿ ಹಳ್ಳ ದಾಟಿ ಅದೇ ಭಾಗದ 8 ಜನ ಕಾಡಿಗೆ ಹೋಗಿದ್ದರು. ಅಲ್ಲಿ ಹರಿಯುವ ಹಳ್ಳದಲ್ಲಿ ಮೀನುಗಾರಿಕೆ ನಡೆಸಿ ಸಂಜೆ ಊರಿಗೆ ಮರಳುತ್ತಿದ್ದರು. ಕವಲಗಿ ಹಳ್ಳದಲ್ಲಿ ಕೈ ಕೈ ಹಿಡಿದು ನಡೆಯುವಾಗ ಏಕಾಏಕಿ ಹಳ್ಳದ ನೀರು ಹೆಚ್ಚಾಯಿತು. ಪರಿಣಾಮ ಮೂವರು ನೀರಿನಲ್ಲಿ ಕೊಚ್ಚಿ ಹೋದರು. ಆ ಪೈಕಿ ಒಬ್ಬರ ರಕ್ಷಣೆ ಮಾಡಿದ್ದು ಉಳಿದಿಬ್ಬರು ನೀರಿನಲ್ಲಿ ಮುಳುಗಿದರು.
ನೀರಿನಲ್ಲಿ ಮುಳುಗಿದವರಿಗಾಗಿ ಭಾನುವಾರ ಸಂಜೆಯಿಂದಲೇ ಶೋಧ ಕಾರ್ಯಾಚರಣೆ ಶುರುವಾಯಿತು. ರಾತ್ರಿಯಿಡೀ ಹುಡುಕಾಟ ನಡೆಸಿದರೂ ಕಣ್ಮರೆಯಾದವರ ಸುಳಿವು ಸಿಗಲಿಲ್ಲ. ಸೋಮವಾರ ಬೆಳಗ್ಗೆಯೂ ಹುಡುಕಾಟ ಮುಂದುವರೆದಿದ್ದು, ಮಧ್ಯಾಹ್ನದ ವೇಳೆ ನೀರಿನ ಆಳದಲ್ಲಿ ಅವಿತಿದ್ದ ಒಂದು ಶವವನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪತ್ತೆ ಮಾಡಿದರು. ಸ್ಥಳೀಯರೆಲ್ಲರೂ ಸೇರಿ ಆ ಶವವನ್ನು ಮೇಲೆತ್ತಿದ್ದರು.
ಮದನಸರ ಗ್ರಾಮದ ರಫೀಕ್ ಇಬ್ರಾಹಿಂ ಸಾಬ್ ಸಯ್ಯದ್( 27), ಹನೀಫ್ ಇಬ್ರಾಹಿಂ ಸಾಬ್ ಸಯ್ಯದ್( 25 ) ಹಾಗೂ ಇಮಾಮ್ ಕಾಶೀಮ್ ಸಯ್ಯದ್ ( 22 ) ಕೊಚ್ಚಿ ಹೋದವರಾಗಿದ್ದು, ಆ ಪೈಕಿ ಇಮಾಮ್ ಸಯ್ಯದ್ ನಿನ್ನೆಯೇ ಬಚಾವಾಗಿದ್ದಾರೆ. ರಫೀಕ್ ಹಾಗೂ ಹನೀಪ್ ಕೊಚ್ಚಿ ಹೋದವರಾಗಿದ್ದು ಸೋಮವಾರ ರಫಿಕ್ ಅವರ ಶವ ಸಿಕ್ಕಿದೆ.
ಇಬ್ಬರು ಮಕ್ಕಳು ಕೊಚ್ಚಿಹೋಗಿದನ್ನು ಕಣ್ಣಾರೆ ಕಂಡ ಇಬ್ರಾಹಿಂ ಸಯ್ಯದ್ ಕಣ್ಣೀರಾದರು. ಶವ ಹುಡುಕಾಟ ಕಾರ್ಯಕ್ಕೆ ಇಡೀ ಊರಿನ ಜನ ಆಗಮಿಸಿದ್ದು ಮೃತರ ಕುಟುಂಬದವರು ನೀರಿಗಿಳಿಯುವ ಪ್ರಯತ್ನದಲ್ಲಿದ್ದರು. ಆದರೆ, ಸುರಕ್ಷತೆ ಕಾರಣದಿಂದ ಪೊಲೀಸರು ಕುಟುಂಬದವರನ್ನು ನೀರಿಗಿಳಿಸಲಿಲ್ಲ.
ಇಡೀ ದಿನದ ಕಾರ್ಯಾಚರಣೆ ಹೇಗಿತ್ತು? ವಿಡಿಯೋ ಇಲ್ಲಿ ನೋಡಿ..
