ಮುಸ್ಲಿಂ ಸಮುದಾಯದವರ ಅರ್ಜಿ ಪ್ರಕಾರ ಅವರಿಗೆ ಸ್ಮಶಾನ ಭೂಮಿ ಮಂಜೂರಿ ವಿಷಯದಲ್ಲಿ ಕಾಲಹರಣ ಮಾಡಿದ ಆರೋಪದ ಅಡಿ ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಲೋಕಾಯುಕ್ತ ದೂರು ನೀಡಿದ್ದಾರೆ.
ಮುಸ್ಲಿಂ ಸಮುದಾಯದವರು ಸ್ಮಶಾನ ಭೂಮಿ ಮಂಜೂರಾತಿಗೆ ಕೋರಿ ಅಲ್ಪ ಸಂಖ್ಯಾತ ಇಲಾಖೆ ಸಚಿವರಿಗೆ ಅರ್ಜಿ ನೀಡಿದ್ದು, ಆ ಅರ್ಜಿ ಮುಖ್ಯಮಂತ್ರಿ ಕಚೇರಿ, ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮೂಲಕ ಕಾರವಾರ ಜಿಲ್ಲಾಡಳಿತಕ್ಕೆ ತಲುಪಿದೆ. ಅಲ್ಲಿಂದ ಮುಂದೆ ಅರ್ಜಿ ವಿಚಾರಣೆಗಾಗಿ ಕುಮಟಾ ತಹಶೀಲ್ದಾರ್ ಕಚೇರಿಗೆ ಬಂದು 4 ತಿಂಗಳಾದರೂ ಮುಂದಿನ ಪ್ರಕ್ರಿಯೆ ನಡೆದಿಲ್ಲ. ಮುಖ್ಯಮಂತ್ರಿ ಸೂಚನೆ ಬಂದರೂ ತಹಶೀಲ್ದಾರ್ ಅರ್ಜಿ ಪ್ರಕ್ರಿಯೆ ಮಾಡಿಲ್ಲ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗಸ್ ದೂರಿದ್ದಾರೆ.
`ಸರ್ಕಾರಿ ಸೂಚನೆ ಪ್ರಕಾರ ನಿಗದಿತ ಅವಧಿಯಲ್ಲಿ ಅರ್ಜಿಗೆ ಹಿಂಬರಹ ನೀಡಬೇಕು. ಆದರೆ, ಆ ನಿಯಮ ಉಲ್ಲಂಘನೆ ನಡೆದ ಬಗ್ಗೆ ದಾಖಲೆಗಳ ಜೊತೆ ಲೋಕಾಯುಕ್ತ ದೂರು ನೀಡಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ. ಕಾರವಾರ ಲೋಕಾಯುಕ್ತರಿಗೆ ಈ ದೂರು ನೀಡಿರುವುದಾಗಿ ಹೇಳಿದ್ದಾರೆ.
