ಪಾಲಿಟೆಕ್ನಿಕ್ ಕಾಲೇಜು ಮುಂದೆ ಬಸ್ ನಿಲುಗಡೆಗೆ ಆಗ್ರಹಿಸಿ ಮುಂಡಗೋಡಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನವರು ಪ್ರತಿಭಟನೆ ನಡೆಸಿದ್ದಾರೆ. ಸೋಮವಾರ ಶಿವಾಜಿ ಸರ್ಕಲ್ ಬಳಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು.
`ಸರ್ಕಾರಿ ಪಾರ್ಟಿಕಲ್ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದು ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತೆರಳಲು ಬಸ್ ಇಲ್ಲ. ಇದರಿಂದ ವಿದ್ಯಾರ್ಥಿಗಳ ತರಗತಿ ತಪ್ಪುತ್ತಿದೆ. ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದೆ’ ಎಂದು ಪ್ರತಿಭಟನಾಕಾರರು ವಿವರಿಸಿದರು. `ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿಕೊಡಬೇಕು. ಹುಬ್ಬಳ್ಳಿ, ಶಿರಸಿ ಭಾಗದಲ್ಲಿ ಓಡಾಡುವ ಬಸ್ಸುಗಳನ್ನು ಕಾಲೇಜಿನ ಮುಂದೆ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿಭಾಗ ಸಂಚಾಲಕ ಸಂಜಯ ಗಾಂವಕರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನಂತರ ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ತಹಶೀಲದಾರರಿಗೆ ಮನವಿ ಸಲ್ಲಿಸಿದರು. ಜಿ ಪಪಂ ಮಾಜಿ ಸದಸ್ಯರಾದ ಎಲ್ ಟಿ ಪಾಟೀಲ, ರಾಜ್ಯ ಕಾರ್ಯಕಾರಣಿ ಸದಸ್ಯ ಯಶ್ ಬೆಣ್ಣಿ, ಖೇಲೋ ಭಾರತ್ ರಾಜ್ಯ ಸಂಚಾಲಕ ನಿಂಗಪ್ಪ ಸುಳ್ಳದ, ವಿದ್ಯಾರ್ಥಿ ಪ್ರಮುಖರಾದ ಶಶಾಂಕ್ ನಾಯ್ಕ, ಪ್ರಶಾಂತ್ ನೇಮಣ್ಣನವರ, ಶಿವಾನಂದ ದೇವಿಕೊಪ್ಪ, ಉಷಾ, ಅಶ್ಮಿತಾ ಇತರರಿದ್ದರು.
