ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಕಡಿಮೆ ದರಕ್ಕೆ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಶಾಲಾ ( School ) ಆಡಳಿತ ಮಂಡಳಿ ಮಾತನಾಡಿದ ಸಂಬಳ ನೀಡುವುದಕ್ಕೂ ಕಾಡಿಸುತ್ತಿದೆ. ದಾಂಡೇಲಿ ನಗರದ ವನಶ್ರೀ ನಗರದಲ್ಲಿರುವ ಪರಿಜ್ಞಾನಾಶ್ರಮ ಶಾಲೆಗಾಗಿ ದುಡಿದವರು ತಮ್ಮ ದುಡಿಮೆಯ ಹಣ ಪಡೆಯುಲು ಬೇರೆ ಕೆಲಸವನ್ನು ಬಿಟ್ಟು ಅಲೆದಾಡುತ್ತಿದ್ದಾರೆ!
ವನಶ್ರೀ ನಗರದಲ್ಲಿರುವ ಪರಿಜ್ಞಾನಾಶ್ರಮ ಶಾಲಾ ( School ) ಕಟ್ಟಡ ನಿರ್ಮಾಣ ಕಾರ್ಯದ ಗೌಂಡಿ ಕೆಲಸವನ್ನು ಪ್ರತಿ ಚದರ ಅಡಿಗೆ 170ರೂ ದರದಲ್ಲಿ ಮಾಡಿಕೊಡಲು ಮಂಜುನಾಥ ಗಿರಿ ಒಪ್ಪಿಕೊಂಡಿದ್ದರು. ಇದರೊಂದಿಗೆ ನೆಲಮಹಡಿಯ ಕೆಲಸವನ್ನು ಮಾಡುವ ಬಗ್ಗೆ 2 ಲಕ್ಷ ರೂಪಾಯಿಯ ಗುತ್ತಿಗೆ ಪಡೆದಿದ್ದರು. 2024 ಮೇ ಪೂರ್ತಿ ಕೆಲಸ ಮಾಡಿ ಮುಗಿಸಿದ್ದಾರೆ.
ಒಟ್ಟು 25 ಕಾರ್ಮಿಕರನ್ನು ಈ ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮಂಜುನಾಥ ಗಿರಿ ಬಳಸಿಕೊಂಡಿದ್ದರು. ಮಂಜುನಾಥ ಗಿರಿ ಅವರು ಸೇರಿದಂತೆ ಇನ್ನಿತರ ಕಾರ್ಮಿಕರ ಜೊತೆ ಸೇರಿ ಮಾಡಿದ್ದ ಕೆಲಸದ ಒಟ್ಟು ಸಂಬಳ 9,70,000ರೂ ಅವರಿಗೆ ಪಾವತಿಯಾಗಬೇಕಿತ್ತು. ಆದರೆ, ಶಾಲೆಯವರು 6,60,000ರೂ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಉಳಿದ ಮೊತ್ತಕ್ಕಾಗಿ ಕಟ್ಟಡ ಕಾರ್ಮಿಕರು ಅಲೆದಾಡುತ್ತಿದ್ದಾರೆ.
ಬಾಕಿ ಮೊತ್ತ ನೀಡುವಂತೆ ಕಳೆದ ಎರಡು ತಿಂಗಳಿನಿAದ ಮಂಜುನಾಥ ಗಿರಿ ಶಾಲಾ ಓಡಾಟ ನಡೆಸಿದ್ದಾರೆ. ಆದರೆ, ಶಾಲೆಯವರು ಮಾತ್ರ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬುದು ಅವರ ಆರೋಪ. ಶಾಲಾ ಮುಖ್ಯ ಕಚೇರಿ ಬೈಲಹೊಂಗಲದಲ್ಲಿದ್ದು, ಅಲ್ಲಿಗೆ ತೆರಳಿದರೂ ಅವರ ಸಮಸ್ಯೆ ಬಗೆಹರಿದಿಲ್ಲ.