ಮುಂಡಗೋಡಿನ ಶಿಕ್ಷಕ ವಿನಾಯಕ ಶೇಟ್ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದಿದೆ. `ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗಾಗಿ ಲಾಭಿ ಮಾಡುತ್ತಿದ್ದ ವಿನಾಯಕ ಶೇಟ್ ಅವರು ಶಿಫಾರಸ್ಸು ಪತ್ರ ಸಿಗದ ಕಾರಣ ಶಾಲಾ ಮುಖ್ಯಾಧ್ಯಾಪಕರ ಜೊತೆ ಗಲಾಟೆ ಮಾಡಿದ ವಿಷಯ ಹೊರ ಬಿದ್ದಿದೆ.
ಮುಂಡಗೋಡಿನ ಲೋಲೊಯಾ ಶಿಕ್ಷಣ ಸಂಸ್ಥೆಯಲ್ಲಿ ವಿನಾಯಕ ಶೇಟ್ ಅವರು ಶಿಕ್ಷಕರಾಗಿದ್ದರು. ಮಕ್ಕಳಿಗೆ ಹಿಂದಿ ಭಾಷೆ ಕಲಿಸುತ್ತಿದ್ದ ಅವರು ಈ ಸಲ `ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಯ ಹಿಂದೆ ಬಿದ್ದಿದ್ದರು. ಇದಕ್ಕಾಗಿ ಅನೇಕ ಕಸರತ್ತುಗಳನ್ನು ನಡೆಸಿದ್ದರು. ಆದರೆ, ಅವರ ಕಸರತ್ತು ಫಲ ಕೊಟ್ಟಿರಲಿಲ್ಲ.
ಪ್ರಶಸ್ತಿಪಡೆಯಲು ಅವರಿಗೆ ಲೋಲೊಯಾ ಶಿಕ್ಷಣ ಸಂಸ್ಥೆಯ ಶಿಫಾರಸ್ಸು ಪತ್ರ ಬೇಕಿತ್ತು. ಅದಕ್ಕಾಗಿ ಸಂಸ್ಥೆಯ ಮುಖ್ಯಾಧ್ಯಾಪಕ ಮಲ್ಲಣ್ಣ ಗೌಡ ಅವರ ಬೆನ್ನು ಬಿದ್ದಿದ್ದರು. ಶಿಫಾರಸ್ಸು ಪತ್ರಕ್ಕೆ ಸಹಿ ಹಾಕುವಂತೆ ಶಿಕ್ಷಕ ವಿನಾಯಕ ಶೇಟ್ ಅವರು ಮುಖ್ಯ ಶಿಕ್ಷಕ ಮಲ್ಲಣ್ಣ ಗೌಡ ಅವರನ್ನು ಕಾಡಿಸುತ್ತಿದ್ದರು. ಆದರೆ, ಮಲ್ಲಣ್ಣ ಗೌಡ ಅವರು ಅವರ ಅರ್ಜಿಯನ್ನು ತಡೆ ಹಿಡಿದಿದ್ದರು. ಅಗಸ್ಟ 11ರಂದು ಬೆಳಗ್ಗೆ 10.30ರಿಂದ ಸಂಜೆ 4.30ರವರೆಗೂ ಮುಖ್ಯಾಧ್ಯಾಪಕರ ಕೊಠಡಿ ಬಳಿ ಸುಳಿದಾಡುತ್ತದ್ದ ವಿನಾಯಕ ಶೇಟ್ ಅವರು ಶಿಫಾರಸ್ಸು ಪತ್ರಕ್ಕೆ ಸಹಿ ಸಿಗದ ಕಾರಣ ಸಿಟ್ಟಾದರು.
ಪೊಲೀಸ್ ಠಾಣೆಗೆ ಕರೆಯಿಸಿ ಶಿಕ್ಷಿಸುವುದಾಗಿ ಮುಖ್ಯಾಧ್ಯಾಪಕ ಮಲ್ಲಣ್ಣ ಗೌಡ ಅವರಿಗೆ ಶಿಕ್ಷಕ ವಿನಾಯಕ ಶೇಟ್ ಬೆದರಿಕೆ ಒಡ್ಡಿದರು. ಇದರಿಂದ ಬೆದರಿದ ಮಲ್ಲಣ್ಣ ಗೌಡ ಅವರು ಆಡಳಿತ ಮಂಡಳಿಗೆ ತಮ್ಮ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಆಡಳಿತ ಮಂಡಳಿಯವರ ಸೂಚನೆ ಪ್ರಕಾರ ನಡೆದ ವಿದ್ಯಮಾನ ಹಾಗೂ ಅನುಭವಿಸಿದ ಅವಮಾನದ ಬಗ್ಗೆ ಲಿಖಿತವಾಗಿ ಬರೆದುಕೊಟ್ಟರು. `ಶಿಕ್ಷಕ ವಿನಾಯಕ ಶೇಟ್ ವಿರುದ್ಧ ಕ್ರಮ ಜರುಗಿಸದೇ ಇದ್ದರೆ ತಮ್ಮ ಜವಾಬ್ದಾರಿ ನಿಭಾಯಿಸಲು ಕಷ್ಟ’ ಎಂದು ಮಲ್ಲಣ್ಣ ಗೌಡ ಅವರು ವಿವರಿಸಿದರು.
`ಶಾಲೆಯನ್ನು ಸರಿಯಾಗಿ ನಡೆಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗಬಾರದು’ ಎಂದು ನಿರ್ಧರಿಸಿದ ಲೋಲೊಯಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಲಿಯೋ ಫ್ಲಾರೆನ್ಸ ವಿನಾಯಕ ಶೇಟ್ ಅವರ ವಿರುದ್ಧ ಲೋಲೊಯಾ ಶಿಕ್ಷಣ ಸಂಸ್ಥೆಗೆ ದೂರು ನೀಡಿದರು.
ಮರಳಿ ಮನೆಗೆ ಬಂದ ವಿನಾಯಕ:
ಈ ಎಲ್ಲಾ ಬೆಳವಣಿಗೆ ಹಿನ್ನಲೆ ದಿಢೀರ್ ನಾಪತ್ತೆಯಾಗಿದ್ದ ವಿನಾಯಕ ಶೇಟ್ ಇದೀಗ ಮರಳಿ ಮನೆಗೆ ಬಂದಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಸುಳಿವು ಸಿಗದ ಕಾರಣ ಅವರ ಪತ್ನಿ ಪದ್ಮಶ್ರೀ ಶೇಟ್ ಅವರು ಪೊಲೀಸರ ಮೊರೆ ಹೋಗಿದ್ದು, ಪೊಲೀಸ್ ಹುಡುಕಾಟದ ನಂತರ ವಿನಾಯಕ ಶೇಟ್ ಅವರು ಸುರಕ್ಷಿತವಾಗಿ ಮನೆ ಸೇರಿದ್ದಾರೆ.
