ಅoಕೋಲಾದ ಗಲ್ಲಿ ಗಲ್ಲಿಯಲ್ಲಿ ಮಟ್ಕಾ ಹಾವಳಿ ಜೋರಾಗಿದ್ದು, ಕೂಲಿ ಕಾರ್ಮಿಕರು ಇದಕ್ಕೆ ಬಲಿಯಾಗುತ್ತಿದ್ದಾರೆ. ಬಡವರ ಸಮಸ್ಯೆ ಅರಿತ ಅಂಕೋಲಾ ಪಿಎಸ್ಐ ಗುರುನಾಥ ಹಾದಿಮನಿ ಅವರು ಮಟ್ಕಾ ಬುಕ್ಕಿಗಳನ್ನು ಮಟ್ಟ ಹಾಕುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಮೊನ್ನೆ ಬೆಳಲೆಯ ಮಟ್ಕಾ ಬುಕ್ಕಿ ನಾಗರಾಜ ನಾಯಕ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದ ಗುರುನಾಥ ಹಾದಿಮನಿ ಅವರು ಇದೀಗ ಮತ್ತೊಬ್ಬ ಮಟ್ಕಾ ಬುಕ್ಕಿಯ ಜಾತಕ ಬಯಲು ಮಾಡಿದ್ದಾರೆ. ಮಜಣ್ಣ ನಾಯ್ಕ ಮಟ್ಕಾ ಬುಕ್ಕಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಅವರು ಬಯಲಿಗೆಳೆದಿದ್ದಾರೆ. ಅಂಕೋಲಾದಲ್ಲಿ ಇನ್ನಷ್ಟು ಮಟ್ಕಾ ಬುಕ್ಕಿಗಳಿದ್ದು, ಜನರ ನೆಮ್ಮದಿ ಹಾಳು ಮಾಡುವ ಅವರ ವಿರುದ್ಧ ಪೊಲೀಸರು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಹಾಗೂ ಲಾಟರಿ ಹಾವಳಿ ತಡೆಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ. ಈ ಹಿನ್ನಲೆ ವಿಶೇಷ ತಂಡವನ್ನು ರಚಿಸಲಾಗಿದೆ. ಆದರೆ, ಆ ತಂಡದವರ ಕಣ್ತಪ್ಪಿಸಿ ಅನೇಕರು ತಮ್ಮ ದಂಧೆ ಮುಂದುವರೆಸಿದ್ದಾರೆ. ಜಿಲ್ಲೆಯ ಮೂಲೆ ಮೂಲೆಗಳಲ್ಲಿಯೂ ವ್ಯಾಪಕ ಪ್ರಮಾಣದಲ್ಲಿ ಮಟ್ಕಾ ದಂಧೆ ನಡೆಯುತ್ತಿದೆ. ಅಲ್ಲಲ್ಲಿ ಮಟ್ಕಾ ಆಡಿಸುವ ಗೂಂಡಗಡಿಕಾರರು, ಕೂಲಿ ಕಾರ್ಮಿಕರು ಹಾಗೂ ಇನ್ನಿತರ ಸಣ್ಣಪುಟ್ಟ ಜೂಜುಕೋರರ ವಿರುದ್ಧ ಕ್ರಮವಾಗುತ್ತಿದೆ. ಆದರೆ, ಅಂಕೋಲಾದಲ್ಲಿ ಮೊದಲಿನಿಂದಲೂ ಬೇರೂರಿರುವ ಮಟ್ಕಾ ಬುಕ್ಕಿಗಳನ್ನು ಸೇರಿಸಿ ಪ್ರಕರಣ ದಾಖಲಿಸಲಾಗುತ್ತಿದೆ.
ಮಟ್ಕಾ ಆಟಗಾರರು ಹಾಗೂ ಮಟ್ಕಾ ಬುಕ್ಕಿಗಳ ವಿರುದ್ಧ ಅನೇಕರು ಮಾಧ್ಯಮಗಳಿಗೂ ದೂರು ನೀಡುತ್ತಿದ್ದಾರೆ. ಪೊಲೀಸರು ಆ ಜಾಡು ಹಿಡಿದು ದಾಳಿ ನಡೆಸುತ್ತಿದ್ದಾರೆ. ಅಂಕೋಲಾ ಅಸಲಗದ್ದೆಯ ನಿತ್ಯಾನಂದ ನಾಯ್ಕ ಅವರು ಪಟ್ಟಣದ ದುರ್ಗಾದೇವಿ ದೇವಸ್ಥಾನದ ಹತ್ತಿರ ಮಟ್ಕಾ ಆಡಿಸುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಮಜಣ್ಣ ನಾಯ್ಕ ಅವರ ಹೆಸರು ಹೊರ ಬಿದ್ದಿದೆ. ಈ ಹಿನ್ನಲೆ ಆ ಇಬ್ಬರ ಮೇಲೆಯೂ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
