ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಾಧನೆ ಮಾಡುವುದು ದೊಡ್ಡ ಸಮಸ್ಯೆಯೇ ಅಲ್ಲ. ಆದರೆ, 10 ನಿಮಿಷದ ಅವಧಿಯಲ್ಲಿ 700ಕ್ಕೂ ಅಧಿಕ ಮಕ್ಕಳು ಒಂದೇ ಶೌಚಾಲಯಕ್ಕೆ ಹೋಗಿಬರುವುದೇ ಅಲ್ಲಿನವರಿಗೆ ದೊಡ್ಡ ಸವಾಲು!
ಉತ್ತರ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಸಾಕಷ್ಟು ಸಾಧನೆ ಮಾಡಿದೆ. ಹಲವು ಪ್ರತಿಭಾನ್ವಿತರನ್ನು ಶಿರಸಿ ಶಿಕ್ಷಣ ಸಂಸ್ಥೆಗಳು ಹೊಂದಿದೆ. ಆದರೆ, ಕನಿಷ್ಟ ಮೂಲಭೂತ ಸೌಕರ್ಯದ ಕೊರತೆಯಿಂದ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆಯೂ ಇಂಥ ಸನ್ನಿವೇಶಗಳು ದುಷ್ಪರಿಣಾಮ ಬೀರುತ್ತಿದೆ.
ಈ ಶಾಲೆಯಲ್ಲಿ ಪ್ರತಿ ಒಂದುವರೆ ತಾಸಿನ ನಂತರ ಮಕ್ಕಳಿಗೆ 10 ನಿಮಿಷ ವಿರಾಮ ನೀಡಲಾಗುತ್ತದೆ. ಮಧ್ಯಾಹ್ನ ಊಟದ ಸಮಯವೂ ಸೇರಿ 40 ನಿಮಿಷ ಬಿಡುವು ನೀಡಲಾಗುತ್ತದೆ. ಈ ಅವಧಿಯಲ್ಲಿ ಮೂತ್ರ ವಿಸರ್ಜನೆಗಾಗಿ ಶೌಚಾಲಯದ ಮುಂದೆ ಮಕ್ಕಳು ತುಂಬಿರುತ್ತಾರೆ. `ಸ್ವಚ್ಛ ಭಾರತ’ದ ಪರಿಕಲ್ಪನೆಯ ಬಗ್ಗೆ ಇಲ್ಲಿನ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ವಿವಿಧ ನಾಯಕರು ಬಂದು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಾರೆ. ಆದರೆ, ಸ್ವಚ್ಛ ಭಾರತದ ಮೂಲ ಕಲ್ಪನೆಗೆ ಅಗತ್ಯವರಿವು ಶೌಚಾಲಯ ಸಮಸ್ಯೆ ಇಲ್ಲಿ ಇನ್ನೂ ಬಗೆಹರಿದಿಲ್ಲ.
ಹಳೆಯ ಶೌಚಾಲಯ ಶಿಥಿಲಗೊಂಡ ಕಾರಣ ಹೊಸ ಶೌಚಾಲಯ ನಿರ್ಮಿಸಲಾಗುತ್ತಿದ್ದು, ಹಳೆಯ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲ. ಹೊಸ ಶೌಚಾಲಯ ಕೆಲಸ ಪೂರ್ಣವಾಗಿಲ್ಲ. 2025ರ ಫೆಬ್ರವರಿಯಲ್ಲಿಯೇ ಶಾಲೆಗೆ ಹಸ್ತಾಂತರವಾಗಬೇಕಿದ್ದ ಹೊಸ ಶೌಚಾಲಯ ಈವರೆಗೂ ಪ್ರಗತಿ ಕಂಡಿಲ್ಲ. ಶೌಚಾಲಯ ನಿರ್ಮಾಣದ ಹೊಣೆ ಹೊತ್ತ ಗುತ್ತಿಗೆದಾರ ಕೆಲಸ ಬಿಟ್ಟು ಪರಾರಿಯಾದರೂ ಕ್ರಮ ಜರುಗಿಸಿದವರಿಲ್ಲ.
`ಶಾಲೆಯಲ್ಲಿ 700ಕ್ಕೂ ಅಧಿಕ ಗಂಡು ಮಕ್ಕಳಿದ್ದಾರೆ. ಶೌಚಾಲಯಕ್ಕೆ ಸಮಸ್ಯೆ ಆಗಿರುವುದು ಸತ್ಯ’ ಎಂದು ಪ್ರಾಚಾರ್ಯ ರಾಜೇಶ ನಾಯ್ಕ ಹೇಳಿದರು. `ಏಕೆ ಹೀಗಾಯಿತು?’ ಎಂದು ಪ್ರಶ್ನಿಸಿದಾಗ ಅವರು ನೈಜ ಕಾರಣ ತಿಳಿಸಲು ಅನುಮಾನ ಮಾಡಿದರು. ಕೊನೆಗೆ ಗುತ್ತಿಗೆದಾರರ ಬಗ್ಗೆ ಪ್ರಶ್ನಿಸಿದಾಗ `ನನಗೇನು ಗೊತ್ತಿಲ್ಲ’ ಎಂದು ಉತ್ತರಿಸಿದರು. ಪ್ರಾಚಾರ್ಯರೇ ಮಕ್ಕಳ ಸಮಸ್ಯೆ ಬಗ್ಗೆ ಧ್ವನಿಯಾಗಲು ಭಯಪಡುತ್ತಿರುವಂತೆ ಗೋಚರಿಸಿತು. `ಇಲ್ಲಿನ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿದೆ. ಗಂಡು ಮಕ್ಕಳ ಬಳಕೆಗೆ ಸಮಸ್ಯೆಯಾಗಿದೆ’ ಎಂದವರು ವಿವರಿಸಿದರು. ಆದರೆ, ಶಾಲೆಯಲ್ಲಿರುವ ನೈಜ ಮಕ್ಕಳ ಸಂಖ್ಯೆ ಹೇಳಲು ತಡವರಿಸಿದರು.
`ಮಕ್ಕಳ ಸಮಸ್ಯೆ ಅರ್ಥ ಮಾಡಿಕೊಂಡು ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ’ ಎಂದು ಕರವೇ ಜನಧ್ವನಿಯ ಅಧ್ಯಕ್ಷ ಉಮಾಕಾಂತ ಹೊಸಕಟ್ಟಾ ಎಚ್ಚರಿಸಿದರು. `ಸೂಕ್ತ ಶೌಚಾಲಯ ಇಲ್ಲದ ಕಾರಣ ಮಕ್ಕಳು ನೀರು ಕುಡಿಯುವುದನ್ನು ಬಿಟ್ಟಿದ್ದಾರೆ. ಅಪೂರ್ಣಗೊಂಡ ಕಾಮಗಾರಿ ಪೂರ್ಣಗೊಳಸಿದೇ ಇದ್ದಲ್ಲಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುತ್ತದೆ’ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಎಚ್ಚರಿಸಿದರು. ತುರ್ತಾಗಿ ನಗರಸಭೆಯಿಂದ ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲು ಅವಕಾಶವಿದ್ದರೂ ಆ ಬಗ್ಗೆ ಯಾರೂ ಆಸಕ್ತಿವಹಿಸಿಲ್ಲ.
