ಅ0ಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ JSW ಕಂಪನಿ ಗುತ್ತಿಗೆಪಡೆದಿದೆ. ಪ್ರಥಮ ಹಂತದಲ್ಲಿಯೇ 4 ಸಾವಿರ ಕೋಟಿ ಹೂಡಿಕೆಗೆ ಕಂಪನಿ ಆಸಕ್ತಿವಹಿಸಿದ್ದು, ಈ ಯೋಜನೆ ಅನುಷ್ಠಾನಕ್ಕಾಗಿ ಹಲವು ಬಗೆಯ ಸುಳ್ಳು ಹೇಳುತ್ತಿದೆ.
ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮೊದಲಿನಿಂದಲೂ ಸಾರ್ವಜನಿಕರಿಂದ ವಿರೋಧವ್ಯಕ್ತವಾಗುತ್ತಿದೆ. ಅದರಲ್ಲಿಯೂ ಮೀನುಗಾರರು ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ಸಾಕಷ್ಟು ಹೋರಾಟ ನಡೆಸಿದ್ದಾರೆ. ಮೀನುಗಾರ ಮಕ್ಕಳು ಓದುವ ಶಾಲೆಗಳಿಗೆ ತೆರಳಿ ಅಲ್ಲಿರುವ ವಿದ್ಯಾರ್ಥಿಗಳಿಗೆ ಆಮೀಷ ಒಡ್ಡಿದನ್ನು ಜನ ವಿರೋಧಿಸಿದ್ದಾರೆ. ಅದಾಗಿಯೂ ಕಂಪನಿ ತನ್ನ ಹಳೆ ಚಾಳಿಯನ್ನು ಬಿಟ್ಟಿಲ್ಲ. ಸುಳ್ಳಿನ ಸುರಿಮಳೆ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಈಗಲೂ ಮುಂದುವರೆದಿದೆ.
`ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ವಿಷಯವಾಗಿ ಅಧ್ಯಯನ ನಡೆಸಿದಾಗ ಯೋಜನೆ ಕಾರ್ಯಸಾಧ್ಯ’ ಎಂಬ ವರದಿ ಬಂದಿರುವುದಾಗಿ ಜೆಎಸ್ಡಬ್ಲು ಕಂಪನಿ ಹೇಳಿಕೊಂಡಿದೆ. ಆದರೆ, ಸರ್ಕಾರ ಮಾತ್ರ `ಈ ಯೋಜನೆ ಅಧ್ಯಯನ ಈವರೆಗೂ ಪೂರ್ಣವಾಗಿಲ್ಲ’ ಎಂದು ಆರ್ಟಿಐ ಅಡಿ ಉತ್ತರಿಸಿದೆ. ಬಂದರು ನಿರ್ಮಾಣದಿಂದ ಆಗುವ ಸಾಧಕ-ಬಾದಕಗಳ ಬಗ್ಗೆ ಅಧಿಕಾರಿಗಳಿಗೂ ಅರಿವಿಲ್ಲ. ಕಂಪನಿಗೂ ಆ ಬಗ್ಗೆ ಏನೂ ಗೊತ್ತಿಲ್ಲ.

ಬಂದರು ಯೋಜನೆಯ ಅಧ್ಯಯನ ಪೂರ್ಣವಾಗದ ಬಗ್ಗೆ RTI ಅಡಿ ಜಲ ಸಾರಿಗೆ ಮಂಡಳಿ ನೀಡಿದ ಉತ್ತರ
ಗುತ್ತಿಗೆ ಕಂಪನಿ ನೀಡಿದ ಪ್ರಕಟಣೆಗೆ ಸರ್ಕಾರ ನೀಡಿದ ಅಧಿಕೃತ ಉತ್ತರಕ್ಕೂ ವ್ಯತ್ಯಾಸವಿದ್ದು, JSW ಕಂಪನಿಯವರು ಸುಳ್ಳು ಹೇಳಲು ಕಾರಣ ಏನು? ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಸರ್ಕಾರ ನೀಡಿದ ಉತ್ತರ ಹಾಗೂ JSW ಕಂಪನಿ ನೀಡಿದ ವ್ಯತ್ಯಾಸದ ಬಗ್ಗೆ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಪ್ರಶ್ನಿಸಿದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಗುತ್ತಿಗೆ ಕಂಪನಿ ಸಾಕಷ್ಟು ಸುಳ್ಳು ಹೇಳುತ್ತಿದ್ದರೂ ಆ ಬಗ್ಗೆ ಅರಿತ ಬಂದರು ಅಧಿಕಾರಿಗಳು ಮೌನವಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಈಗಾಗಲೇ ಹಲವು ಯೋಜನೆಗಳಿಗೆ ಜನ ತ್ಯಾಗ ಮಾಡಿದ್ದಾರೆ. ಆದರೆ, ಅದರಿಂದ ಅಭಿವೃದ್ಧಿ ಏನೂ ಆಗಿಲ್ಲ. ನಿರಾಶ್ರಿತರ ಸಮಸ್ಯೆಯನ್ನು ಆಲಿಸಿದವರಿಲ್ಲ. ಹೀಗಿರುವಾಗ ಬಂದರು ನಿರ್ಮಾಣದ ನಂತರ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂದು ಕಂಪನಿ ಹೇಳುತ್ತದೆ. ಆದರೆ, ಈಗಾಗಲೇ ಅನೇಕ ಉದ್ಯೋಗಿಗಳನ್ನು ಕಂಪನಿಪಡೆದಿದ್ದು, ಅದರಲ್ಲಿ ಸ್ಥಳೀಯರು ಕಾಣುತ್ತಿಲ್ಲ. ಹೀಗಾಗಿ ಸ್ಥಳೀಯರಿಗೂ ಈ ಕಂಪನಿ ಮೇಲೆ ವಿಶ್ವಾಸವಿಲ್ಲ.
