`ಪಾಪದ ಕುಂಡದಲ್ಲಿರುವ ಮನುಷ್ಯರನ್ನು ಪುಣ್ಯದ ದಾರಿಯಲ್ಲಿ ನಡೆಸಲು ಗುರುಗಳ ಮಾರ್ಗದರ್ಶನ ಅಗತ್ಯ\’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ ವೃತದಲ್ಲಿರುವ ಅವರು `ಗುರುಗಳು ನಮ್ಮನ್ನು ಉದ್ಧರಿಸಲು ಲೋಕದಲ್ಲಿ ಪ್ರಕಟಗೊಳ್ಳುತ್ತಾರೆ. ಗುರು ಎಂದರೆ ದೇವರು ನೀಡುವ ಆಶೀರ್ವಾದ. ಪಾಪದ ಕುಂಡದಲ್ಲಿರುವ ನಮ್ಮನ್ನು ಅನುಗ್ರಹಿಸಲು ಗುರು ಅವತಾರವೆತ್ತಿ ಬರುತ್ತಾರೆ\’ ಎಂದರು.
`ರಾಮಾಯಣದಲ್ಲಿ ದಶರಥನ ಧ್ವನಿ ಬಗ್ಗೆ ದುಂದುಬಿಯ ನಾದಕ್ಕೆ ಸದೃಶವಾದ ನಾದ, ಗಂಭೀರ, ಮಾತುಗಳು ಮತ್ತೆ ಮತ್ತೆ ಅನುರಣಿಸುವಂಥದ್ದು. ಗುಡುಗಿನ ಧ್ವನಿ, ರಾಜಲಕ್ಷಣದ ಧ್ವನಿ, ಕೇಳಿದ ತಕ್ಷಣವೇ ಆಪ್ಯಾಯಮಾನವಾಗುವ, ಉಪಮೆ ಇಲ್ಲದ ಧ್ವನಿ ಎಂಬ ಉಲ್ಲೇಖ ವಾಲ್ಮೀಕಿ ರಾಮಾಯಣದಲ್ಲಿದೆ. ದೊಡ್ಡ ಗುರುಗಳ ಧ್ವನಿಯೂ ಅಂಥದ್ದೇ ಆಪ್ಯಾಯಮಾನ ಧ್ವನಿ\’ ಎಂದು ಬಣ್ಣಿಸಿದರು.
`ಆಯುರ್ವೇದಕ್ಕೆ ಜ್ಯೋತಿಷ್ಯ ಕಡ್ಡಾಯವಾಗಬೇಕು. ಆಯುರ್ವೇದದಲ್ಲಿ ಜ್ಯೋತಿಷ್ಯಕ್ಕೆ ದೊಡ್ಡ ಸ್ಥಾನವಿದೆ. ಜಾತಕದಿಂದ ಆರೋಗ್ಯ, ರೋಗ, ಯಾವ ಅಂಗದಲ್ಲಿ ರೋಗವಿದೆ, ಯಾವ ಧಾತು ರೋಗಕ್ಕೆ ಕಾರಣವಾಗಿದೆ ಎನ್ನುವುದನ್ನು ತಿಳಿಯಬಹುದು. ಕಾಯಿಲೆಕಾರಕ ಗ್ರಹದ ದಶಾಭುಕ್ತಿಯಲ್ಲಿ ಆ ರೋಗ ಬರಬಹುದು. ಜ್ಯೋತಿಷ್ಯದ ಮೂಲಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಅವಕಾಶವಿದೆ\’ ಎಂದರು.