`ಧರ್ಮ ಎಂಬ ಶಬ್ದಕ್ಕೆ ಹಲವಾರು ವ್ಯಾಖ್ಯೆಗಳಿವೆ. ಉನ್ನತ ಸತ್ಯಗಳಿಗೆ ನಮಗೆ ಅನ್ವಯ ಆಗುವ ರೀತಿಯಲ್ಲಿ ರೂಪಗಳನ್ನು ತೊಡಿಸಿ ಆ ಮೂಲಕ ನಾವು ಮೇಲಕ್ಕೆ ಹತ್ತುವುದೇ ಧರ್ಮ\’ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಮಠಾಧೀಶ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಸ್ವರ್ಣವಲ್ಲೀ ಮಠದ ಚಾತುರ್ಮಾಸ್ಯ ವೃತದಲ್ಲಿರುವ ಅವರು ಶಿವಳ್ಳಿ ಸೀಮಾ ಶಿಷ್ಯರಿಂದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
`ನಮ್ಮ ಸಾಮಾನ್ಯ ದೃಷ್ಟಿಗಳಿಗೆ ಗೋಚರಿಸದ ಉನ್ನತ ಸತ್ಯಗಳು ಜಗತ್ತಿನಲ್ಲಿ ಇವೆ. ಅಂತಹ ಸತ್ಯಗಳಿಗೆ ನೇರವಾಗಿ ನಮಗೆ ತಲುಪುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ಅದಕ್ಕೆ ಒಂದು ರೂಪ, ಆಕಾರಗಳನ್ನು ತೊಡಿಸಿ ನಮಗೆ ಕಾಣಿಸುವಂತೆ ಮಾಡುವುದು ಮತ್ತು ಆ ಮೂಲಕ ಎತ್ತರಕ್ಕೆ ನಾವು ಹತ್ತಬೇಕು. ಈ ಒಂದು ಸಾಧನೆಯೇ ಧರ್ಮ\’ ಎಂದರು.
`ಮೇಲಕ್ಕೆ ಹತ್ತುವುದಕ್ಕೋಸ್ಕರೆವೇ ಮನುಷ್ಯ ಜನ್ಮ ಬಂದಿದೆ. ಈ ಸೃಷ್ಟಿಯಲ್ಲಿ ಅಭ್ಯುದಯ ಮತ್ತು ನಿಶ್ರೇಯಸ್ಸು. ಅಭ್ಯುದಯ ಅಂದರೆ ಏಳಿಗೆ. ನಿಶ್ರೇಯಸ್ಸು ಅಂದರೆ ಮೋಕ್ಷ. ಮನುಷ್ಯ ಜನ್ಮವನ್ನು ಉನ್ನತಿಗೆ ಏರುವ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕು\’ ಎಂದರು.
ಇದನ್ನು ಓದಿ: ಗುರುವಿನ ಬಗ್ಗೆ ರಾಘವೇಶ್ವರ ಶ್ರೀ ಹೇಳಿದ್ದೇನು?
`ಉನ್ನತಿಗೆ ಏರುವಂತಹ ಸಾಧನವೇ ಧರ್ಮ. ನಾವು ಮಾಡುವಂತಹ ಉಪಾಸನೆ, ಪೂಜೆ, ಯಜ್ಞ, ದಾನಗಳ ಮೂಲಕ ಅವನನ್ನು ಇನ್ನಷ್ಟು ಹತ್ತಿರ ಮಾಡಿಕೊಳ್ಳಬೇಕು. ಪರಮಾತ್ಮನನ್ನು ಹತ್ತಿರವಾಗಿಸಿಕೊಳ್ಳಬೇಕು. ಸ್ವರ್ಗ ಮತ್ತು ಉತ್ತಮ ಲೋಕಗಳನ್ನು ಪಡೆಯುವುದೇ ಅಭ್ಯುದಯ. ಉತ್ತಮ ಲೋಕವನ್ನು ಪಡೆಯಲು ಮಾಡುವ ಕರ್ಮಗಳ ಸಾಧನೆ, ಮೋಕ್ಷಕ್ಕೋಸ್ಕರ ಮಾಡುವ ಸಾಧನೆ ಧರ್ಮವಾಗುತ್ತದೆ\’ ಎಂದರು.
`ಜೀವನದಲ್ಲಿ ನಾವು ಪ್ರತಿಮೆಯ ರೂಪದಲ್ಲಿ ದೇವರ ಪೂಜೆ, ಅಗ್ನಿಯ ಆರಾಧನೆ ಇವುಗಳನ್ನು ನಿತ್ಯವೂ ಮಾಡಬೇಕು. ಅವುಗಳ ಮೂಲಕ ಧರ್ಮದ ದಾರಿಯಲ್ಲಿ ನಡೆದು ಮಾನವ ಜನ್ಮದ ಸಾರ್ಥಕತೆಯನ್ನು ಪಡೆದುಕೊಳ್ಳಬೇಕು. ಸಹಜವಾದ ಸರ್ವರ ಹಿತಕ್ಕೆ ಸಹಕರಿಸುವುದು ನಮ್ಮ ಜೀವನವನದ ಪ್ರತಿಯೊಂದು ಕೆಲಸದಲ್ಲಿ ನೆಡೆಸಿಕೊಂಡು ಹೋದರೆ ಆಗ ಇಡೀ ಜೀವನವೇ ಧರ್ಮಮಯವಾಗುತ್ತದೆ\’ ಎಂದರು.