ಬಸ್ಸು ಹಾಗೂ ಲಾರಿ ನಡುವೆ ಶಿರಸಿಯಲ್ಲಿ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 9 ಜನ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಲಾರಿ ಹಾಗೂ ಬಸ್ಸು ಎರಡೂ ಜಖಂ ಆಗಿದೆ.
ಅಗಸ್ಟ 17ರಂದು ಕುಮಟಾದ ಬರ್ಗಿಯ ಮನೋಜ ಹರಿಕಂತ್ರ ಅವರು ಶಿರಸಿ-ವಡ್ಡಿ-ಗೋಕರ್ಣ ರಸ್ತೆಯಲ್ಲಿ ಲಾರಿ ಓಡಿಸುತ್ತಿದ್ದರು. ಸದಾ ವೇಗವಾಗಿಯೇ ವಾಹನ ಓಡಿಸುವ ಅವರು ಆ ದಿನ ಆ ರಸ್ತೆಯಲ್ಲಿಯೂ ಲಾರಿ ವೇಗವನ್ನು ತಗ್ಗಿಸಿರಲಿಲ್ಲ. ಅದೇ ವೇಳೆ ಮತ್ತಿಘಟ್ಟಾದಿಂದ ಪ್ರಯಾಣಿಕರನ್ನು ಹೊತ್ತ ಬಸ್ಸು ಶಿರಸಿ ಕಡೆ ಹೊರಟಿದ್ದು, ಆ ಬಸ್ಸಿಗೆ ಎದುರಿನಿಂದ ಮನೋಜ ಹರಿಕಂತ್ರ ಅವರ ಲಾರಿ ಗುದ್ದಿತು.
ಪರಿಣಾಮ ಬಸ್ಸಿನ ಚಾಲಕ ದಿನೇಶ ನಾಯ್ಕ ಅವರ ಕಾಲು ಮುರಿಯಿತು. ಕೈಗೆ ಗಾಯವಾಯಿತು. ಆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಮತ್ತಿಘಟ್ಟಾದ ವೆಂಕಟ್ರಮಣ ಭಟ್ಟ ಅವರಿಗೂ ಪೆಟ್ಟಾಯಿತು. ಜೊತೆಗೆ ಆ ಬಸ್ಸಿನಲ್ಲಿದ್ದ ಶ್ರೀಧರ ಭಟ್ಟ ಅವರಿಗೆ ತೆರಚಿದ ಗಾಯವಾಯಿತು. ಮಾದೇವಿ ಮಹಾಲೆ ಅವರ ಎರಡು ಕಾಲಿಗೆ ಗಾಯವಾಯಿತು. ಲಕ್ಷಿ ಮರಾಠಿಗೆ ತೆರಚಿದ ಗಾಯವಾಯಿತು.
ದೇವನಳ್ಳಿ ಬೈಲಗದ್ದೆಯ ಪುರಷ್ಯ ಮರಾಠಿ ಅವರಿಗೆ ಕುತ್ತಿಗೆ ಹಾಗೂ ಕಾಲಿಗೆ ನೋವಾಯಿತು. ಈ ಅಪಘಾತದಲ್ಲಿ ಯಡಳ್ಳಿ ಯಶೋಧಾ ಹೆಗಡೆ ಅವರಿಗೆ ಕುತ್ತಿಗೆ ಹಾಗೂ ಕಾಲಿಗೆ ಪೆಟ್ಟಾಯಿತು. ಮತ್ತಿಘಟ್ಟ ಪರಮೇಶ್ವರ ಭಟ್ಟ ಮೂಗು ಹಾಗೂ ಕಾಲಿಗೆ ಗಾಯವಾಯಿತು. ದೇವನಳ್ಳಿಯ ನಾರಾಯಣ ಚನ್ನಯ್ಯ ಅವರಿಗೆ ತುಟಿ ಹಾಗೂ ಕೈಗಳಿಗೆ ನೋವಾಯಿತು.
ಅಪಘಾತದ ರಭಸಕ್ಕೆ ಎರಡು ವಾಹನ ನುಗ್ಗಾಗಿದ್ದು, ಮತ್ತಿಘಟ್ಟಾದ ವೆಂಕಟ್ರಮಣ ಭಟ್ಟ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಲಾರಿ ಚಾಲಕನ ವಿರುದ್ಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.





Discussion about this post