ಯಲ್ಲಾಪುರದ ಕಾಳಮ್ಮನಗರದಲ್ಲಿ ವಾಸಿಸುವ ಪರಿಶಿಷ್ಟ ಸಮುದಾಯ ಸಿದ್ದಿ ಸಮುದಾಯದ ಮನೆಗಳಿಗೆ ಈವರೆಗೂ ವಿದ್ಯುತ್ ಸಂಪರ್ಕ ಇಲ್ಲದ ಬಗ್ಗೆ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಲಿಖಿತವಾಗಿ ಗೊಂದಲದ ಉತ್ತರ ನೀಡಿದ ಕಾರಣ ಅವರು ಸ್ಪಷ್ಠೀಕರಣಬಯಸಿದ್ದು, ಅದಾದ ನಂತರ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಶಾಂತರಾಮ ಸಿದ್ದಿ ಅವರನ್ನು ಸಮಾಧಾನ ಮಾಡಿದ್ದಾರೆ.
`ಗೃಹಜ್ಯೋತಿ ಯೋಜನೆ ಕಾಳಮ್ಮ ನಗರದಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಸಿಗುತ್ತಿಲ್ಲ’ ಎಂದು ಶಾಂತರಾಮ ಸಿದ್ದಿ ಅವರು ಹೇಳಿದ್ದಾರೆ. ಅಲ್ಲಿನ ಮನೆಗಳಿಗೆ ಯಾವ ಕಾಲಕ್ಕೆ ವಿದ್ಯುತ್ ಪೂರೈಕೆ ಮಾಡುವಿರಿ? ಎಂದು ಪ್ರಶ್ನಿಸಿದ್ದಾರೆ. `ಕಾಳಮ್ಮ ನಗರದಲ್ಲಿ ಪರಿಶಿಷ್ಟ ಪಂಗಡದ 15, ಪ.ಜಾತಿಯ 9 ಹಾಗೂ ಇತರೆ ವರ್ಗದ 23 ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ’ ಎಂದವರು ಅಧೀವೇಶನದಲ್ಲಿ ಗಮನಸೆಳೆದಿದ್ದಾರೆ.
ಇಂಧನ ಸಚಿವ ಕೆ ಜೆ ಜಾರ್ಜ್ ಇದಕ್ಕೆ ಉತ್ತರಿಸಿದ್ದು `ವಿದ್ಯುತ್ ಸಂಪರ್ಕ ಕಲ್ಪಿಸಲು ಜಾಗದ ಮಾಲೀಕನೆಂದು ಹೇಳಿಕೊಂಡವರ ತಕರಾರು ಇದೆ. ವಿದ್ಯುತ್ ನೀಡಲು ವಾಸ್ತವ್ಯದ ದಾಖಲಾಗಿ ಅಗತ್ಯವಿದ್ದು, ಸ್ಥಳೀಯ ಆಡಳಿತದಿಂದ ಧೃಢೀಕರಣ ಪತ್ರ ನೀಡಿದಲ್ಲಿ ತಕ್ಷಣ ವಿದ್ಯುತ್ ಸಂಪರ್ಕ ಕೊಡಲಾಗುತ್ತದೆ’ ಎಂದು ಉತ್ತರಿಸಿದರು. ಇದಕ್ಕೆ ಅಸಮಧಾನವ್ಯಕ್ತಪಡಿಸಿದ ಶಾಂತಾರಾಮ ಸಿದ್ದಿ `ಜಾಗದ ಮಾಲೀಕನೆಂದು ಹೇಳಿಕೊಂಡವರ ತಕರಾರು ಇಲ್ಲಿ ಪ್ರಸ್ತುತವಲ್ಲ. ಅದು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಬಡವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೂ, ಆ ವಿಷಯಕ್ಕೂ ಸಂಬAಧವಿಲ್ಲ’ ಎಂದರು.
`ಕಾಳಮ್ಮನಗರದಲ್ಲಿ ವಾಸಿಸುತ್ತಿರುವ ಆ ಜನರು ಮನೆ, ಆಧಾರ್ ಕಾರ್ಡ್, ಪಡಿತರ ಚೀಟಿ, ನೀರಿನ ಸಂಪರ್ಕ ಹೊಂದಿದ್ದಾರೆ. ಇದೆಲ್ಲವೂ ಸರ್ಕಾರದ ವ್ಯವಸ್ಥೆಯೇ ಅಲ್ಲವೆ?’ ಎಂದು ಪ್ರಶ್ನಿಸಿದರು. `ಈ ವ್ಯವಸ್ಥೆಗಳನ್ನು ಹೊಂದಿದ ಆಧಾರದ ಮೇಲೆ ವಿದ್ಯುತ್ ಸಂಪರ್ಕ ನೀಡಲು ಏಕೇ ಸಾಧ್ಯವಿಲ್ಲ?’ ಎಂದು ಪ್ರಶ್ನಿಸಿದರು. `ಈ ಎಲ್ಲ ದಾಖಲೆಗಳನ್ನು ಹೊಂದಿರುವುದು ನನ್ನ ಗಮನಕ್ಕಿಲ್ಲ. ಇದೇ ಆಧಾರದ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಇಂಧನ ಸಚಿವರು ಸಮಾಧಾನ ಮಾಡಿದರು.
Discussion about this post