ಜಿಲ್ಲಾಡಳಿತದ ಸೂಚನೆ ಮೀರಿ ಅರಬ್ಬಿ ಸಮುದ್ರಕ್ಕೆ ಹೋಗಿದ್ದ ಮೀನುಗಾರರೊಬ್ಬರು ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದ್ದಾರೆ.
ಸಮುದ್ರದಲ್ಲಿ ವಾತಾವರಣ ಸರಿಯಿಲ್ಲದ ಕಾರಣ ಮೀನುಗಾರಿಕೆಗೆ ಹೋಗದಂತೆ ಜಿಲ್ಲಾಡಳಿತ ಎಚ್ಚರಿಸಿತ್ತು. ಮೀನುಗಾರಿಕೆ ಇಲಾಖೆಯೂ ಈ ಬಗ್ಗೆ ಸೂಚನೆ ನೀಡಿತ್ತು. ಅದಾಗಿಯೂ, ದುಡಿಮೆಗೆ ಬೇರೆ ದಾರಿ ಇಲ್ಲದ ಕಾರಣ ಈಶ್ವರ ಹರಿಕಂತ್ರ (44) ಅವರು ಮೀನು ಹಿಡಿಯಲು ಹೋಗಿದ್ದರು. ಆದರೆ, ಅವರು ಮರಳಿ ಬರಲಿಲ್ಲ.
ಅಂಕೋಲಾ ಸಡಗೇರಿಯ ಮೋಟನ್ ಕೂರ್ವೆಯ ಈಶ್ವರ ಹರಿಕಂತ್ರ (44) ಅವರು ಅಗಸ್ಟ 15ರ ರಾತ್ರಿ 10.30ರವರೆಗೂ ಮೀನುಗಾರಿಕೆ ಮಾಡುತ್ತಿದ್ದರು. ಶಾಂತಿಕಾ ಪರಮೇಶ್ವರ ಎಂಬ ಕಟ್ಟಿಗೆಯ ದೋಣಿ ಮೂಲಕ ಅವರು ಸಮುದ್ರಕ್ಕೆ ಇಳಿದಿದ್ದರು. ಗಂಗಾವಳಿ ನದಿ ಸಮುದ್ರ ಸೇರುವ ಸ್ಥಳವಾದ ಮೋಟನ್ ಕೂರ್ವೆ ಪ್ರದೇಶ ತಲುಪಿದಾಗ ಏಕಾಏಕಿ ರಭಸ ಅಲೆಯೊಂದು ಆಗಮಿಸಿತು. ಆಗ, ಅವರ ದೋಣಿ ಮುಗುಚಿ ಬಿದ್ದಿತು.
ಈಶ್ವರ ಹರಿಕಂತ್ರ ಅವರಿಗೆ ಈಜು ಗೊತ್ತಿತ್ತು. ಆದರೆ, ಸಮುದ್ರದ ಸುಳಿಯಲ್ಲಿ ಅವರ ಈಜು ಪ್ರಯೊಜನಕ್ಕೆ ಬರಲಿಲ್ಲ. ನೀರಿನಲ್ಲಿ ಮುಳುಗಿದ ಅವರು ಮತ್ತೆ ಮೇಲೆ ಏಳಲಿಲ್ಲ. ಅಗಸ್ಟ 17ರಂದು ದುಬ್ಬಿನಶಶಿ ಗ್ರಾಮದಲ್ಲಿ ಅವರು ಶವವಾಗಿ ಕಾಣಿಸಿಕೊಂಡರು. ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈಶ್ವರ ಅವರ ಸಹೋದರ ಸುಬ್ರಾಯ ಹರಿಕಂತ್ರ ಅವರು ನೀಡಿದ ಮಾಹಿತಿ ಅನ್ವಯ ಪ್ರಕರಣ ದಾಖಲಿಸಿದರು.
Discussion about this post