ಕಾರವಾರದ ಮುದುಗಾ ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪಾಲಕರಿಗೂ ದುಶ್ಚಟಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದಿoದ ಮುದುಗಾದ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ `ನಶಾ ಮುಕ್ತ ಭಾರತ ನಿರ್ಮಾಣ ಆಂದೋಲನ’ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಪ್ರತಿಜ್ಞೆ ಸ್ವೀಕರಿಸಿದರು.
ಅಭಿಯಾನದ ಪ್ರತಿನಿಧಿ ಗೀತಾ ಅಂಬಿಗ ಅವರು ಗುಟ್ಕಾ, ಪಾನ್ ಮಸಾಲ, ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ದುಶ್ಚಟಗಳಿಂದ ಕೌಟುಂಬಿಕ ಕಲಹ ಆಗುತ್ತಿರುವ ಬಗ್ಗೆಯೂ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ವೀಣಾ ಜಿ ಮಾಳಿಗೆರ ಅವರು `ಸಮಾಜದ ಏಳಿಗೆಗೆ ದುಶ್ಚಟಗಳು ಮಾರಕವಾಗಿದೆ. ಈ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಅಗತ್ಯ’ ಎಂದು ಹೇಳಿದರು.
ಶಿಕ್ಷಕ ಜೈ ರಂಗನಾಥ ಬಿ ಎಸ್ ಅವರು ವಿವಿಧ ಉದಾಹರಣೆಗಳ ಜೊತೆ ಮಕ್ಕಳ ಮನವರಿಕೆ ಮಾಡಿದರು. ಪ್ರಮುಖರಾದ ಸ್ಮಿತಾ ನಾಯ್ಕ, ನಿಖಿತಾ ನಾಯ್ಕ, ನಾಗರಾಜ್ ಗೌಡ, ವಿಠ್ಠಲ ಗಡ್ ಮೊದಲಾದವರು ಈ ವೇಳೆ ಪ್ರತಿಜ್ಞೆ ಸ್ವೀಕರಿಸಿದರು.
