ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿರುವುದನ್ನು ಭಕ್ತರು ಖಂಡಿಸಿದ್ದಾರೆ. ಧರ್ಮಸ್ಥಳದ ಅವಹೇಳನ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ವೀರೇಂದ್ರ ಹೆಗ್ಗಡೆ ಅವರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ.
ಮಂಗಳವಾರ ಶಿರಸಿಯಲ್ಲಿ ಧರ್ಮಸ್ಥಳದ ಭಕ್ತರು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದರು. ಅಪಪ್ರಚಾರ ನಡೆಸುವವರ ವಿರುದ್ಧ ಕಾನೂನು ಕ್ರಮಕ್ಕಾಗಿ ಹಕ್ಕೊತ್ತಾಯ ಮಾಡಿದರು. `ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳ 800 ವರ್ಷಗಳ ಐತಿಹ್ಯ ಹೊಂದಿದೆ. ಪ್ರಪಂಚ ನಾನಾ ಮೂಲೆಗಳಿಂದ ಇಲ್ಲಿ ಭಕ್ತರು ಬರುತ್ತಿದ್ದು, ಮಂಜುನಾಥ ಸ್ವಾಮಿ ಕ್ಷೇತ್ರದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅವಹೇಳನ ನಡೆಯುತ್ತಿದೆ. ಇದನ್ನು ತಕ್ಷಣ ತಡೆಯಬೇಕು’ ಎಂದು ಆಗ್ರಹಿಸಿದರು.
`ಕಳೆದ ಕೆಲವು ವರ್ಷಗಳಿಂದ ಗಿರೀಶ್ ಮಟ್ಟಣ್ಣನವರ, ಮಹೇಶ ಶೆಟ್ಟಿ ತಿಮರೋಡಿ, ಸಮೀರ್ ಎಮ್ ಡಿ, ಜಯಂತ್ ಟಿ ಹಾಗೂ ಅವರ ಸಹಚರರು ಮಂಜುನಾಥ ಸ್ವಾಮಿ ದೇವಾಲಯ ಹಾಗೂ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕತರುವ ಪ್ರಯತ್ನ ಮಾಡುತ್ತಿದ್ದಾರೆ. ಕೀಳು ಮಟ್ಟದ ಭಾಷೆ ಬಳಸಿ ಅವರ ವಿರುದ್ಧ ವಿಡಿಯೋ ಮಾಡುತ್ತಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ದೇವಾಲಯವನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದರಿಂದ ಕ್ಷೇತ್ರದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ’ ಎಂದು ಪ್ರತಿಭಟನಾಕಾರರು ವಿವರಿಸಿದರು.
`ಅನಾಮಿಕ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿ ತನಿಖೆ ಮಾಡಿದನ್ನು ಎಲ್ಲರೂ ಸ್ವಾಗತಿಸಿದ್ದೇವೆ. ಆದರೆ, ಇದೀಗ ಅನಾಮಿಕ ದೂರುದಾರನನ್ನು ಬಳಸಿಕೊಂಡು ಶ್ರೀ ಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ಯೂಟ್ಯೂಬ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಮಾಹಿತಿಗಳನ್ನು ಭಿತ್ತರಿಸಿ ಭಕ್ತರಲ್ಲಿ ಗೊಂದಲ ಉಂಟು ಮಾಡಲಾಗುತ್ತಿದೆ. ಈ ತಂಡಕ್ಕೆ ಸಿಗುವ ಹಣಕಾಸಿನ ನೆರವಿನ ಬಗ್ಗೆ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು. `ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಗಳು ಸಮೂಹ ಮಾದ್ಯಮಗಳಲ್ಲಿ ಪ್ರಸಾರವಾಗದಂತೆ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದರು.
ಸೊಂದಾ ಜೈನ ಮಠದ ಜಗದ್ಗುರು ಸ್ವಸ್ತಿ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ ಸ್ವಾಮೀಜಿ, ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಧರ್ಮಸ್ಥಳ ಭಕ್ತ ವೇದಿಕೆಯ ಅಧ್ಯಕ್ಷ ಉಪೇಂದ್ರ ಪೈ, ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ದುಭಾಶಿ, ಲಿಂಗಾಯತ ಮುಖಂಡ ಗಣೇಶ ಸಣ್ಣಲಿಂಗಣ್ಣನವರ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ನಗರ ಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಸಭೆ ಉಪಾಧ್ಯಕ್ಷ ರಮಾಕಾಂತ ಭಟ್ಟ, ಪ್ರಮುಖರಾದ ರಾಘವೇಂದ್ರ ಶೆಟ್ಟಿ, ಕುಮಾರ ಬೊರ್ಕರ, ಸುಧೀರ ನಾಯರ್, ನವೀನ ಶೆಟ್ಟಿ, ಸದಾನಂದ ಭಟ್ಟ, ರಮೇಶ ನಾಯ್ಕ, ನಂದನ ಸಾಗರ, ಅನಂತಮೂರ್ತಿ ಹೆಗಡೆ ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು.
Discussion about this post