ಮೂರು ಸಲ ಮುನ್ನಚ್ಚರಿಕೆ ನೀಡಿದ ನಂತರ ಸೂಪಾ ಅಣೆಕಟ್ಟಿನ ಅಧಿಕಾರಿಗಳು ಜಲಾಯಶದಲ್ಲಿ ಹೆಚ್ಚುವರಿಯಾಗಿದ್ದ ನೀರನ್ನು ಹೊರಬಿಟ್ಟಿದ್ದು, ಅಣೆಕಟ್ಟಿನ ಅಡಿಭಾಗಗಳು ಜಲಾವೃತಗೊಂಡಿದೆ.
ಆದರೆ, ಓದು-ಬರಹ ಕಲಿಯದ ಅಜ್ಜ ಜನ್ನು ಗಾವಡೆಗೆ ಅಧಿಕಾರಿಗಳು ನೀಡಿದ ಮುನ್ನಚ್ಚರಿಕೆ ಅರಿವಿಗೆ ಬಂದಿಲ್ಲ. ಈ ಬಗ್ಗೆ ಮನೆಯಲ್ಲಿ ಹೇಳಿದ್ದರೂ ಅದು ಆತನಿಗೆ ಕೇಳಿರಲಿಲ್ಲ. ಹೀಗಾಗಿ ನಿತ್ಯದ ಕಾಯಕದಂತೆ ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದ ಜನ್ನು ಗಾವಡೆ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದು, ಸಾಹಿಸಿ ಪ್ರವಾಸೋಧ್ಯಮಿಗಳು ಆತನನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ಸುರಿದ ಮಳೆಯಿಂದ ಕಾಳಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ಅಣೆಕಟ್ಟು ಭದ್ರತೆ ಕಾರಣದಿಂದ ಅಧಿಕಾರಿಗಳು ನೀರು ಹೊರಬಿಟ್ಟಿದ್ದಾರೆ. ಕಳೆದ 1 ವಾರದಿಂದ ಯಾವುದೇ ಕ್ಷಣದಲ್ಲಿ ನೀರು ಹೊರಬಿಡುವ ಬಗ್ಗೆ ಅಧಿಕಾರಿಗಳು ಮುನ್ನಚ್ಚರಿಕೆ ನೀಡಿದ್ದರು. ಆದರೆ, ತುರ್ತು ಪರಿಸ್ಥಿತಿ ಬಾರದ ಹೊರತು ಅವರು ನೀರು ಬಿಟ್ಟಿರಲಿಲ್ಲ. ಅಧಿಕಾರಿಗಳ ಎಚ್ಚರಿಕೆಯ ಬಗ್ಗೆ ಜನ್ನು ಗಾವಡೆಗೆ ಆಲೋಚನೆಯಿರಲಿಲ್ಲ. ಹೀಗಾಗಿ ಎಮ್ಮೆ ಮೇಯಿಸಿಕೊಂಡು ಬೊಮ್ಮನಳ್ಳಿ ಕಡೆ ಹೊರಟಿದ್ದು, ಮಂಗಳವಾರ ಮಧ್ಯಾಹ್ನ ಏಕಾಏಕಿ ನೀರು ಬಂದ ಕಾರಣ ಎತ್ತರದ ಪ್ರದೇಶದ ಕಡೆ ಓಡಿದ್ದರು.
ಇದನ್ನೂ ಓದಿ: ನಾಟಿ ವೈದ್ಯರಿಗೆ ನಾಟಕ ಅಂದರೆ ಪ್ರಾಣ!
ರಾತ್ರಿ ಕಳೆದರೂ ಅಜ್ಜ ಮನೆಗೆ ಬರದ ಕಾರಣ ಆತಂಕಗೊoಡ ಮನೆಯವರು ಈ ಬಗ್ಗೆ ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರಿಗೆ ಮಾಹಿತಿ ನೀಡಿದರು. ತಕ್ಷಣ ತಹಶೀಲ್ದಾರ್ ಅಂಬಿಕಾನಗರದ ಅಣೆಕಟ್ಟು ಅಧಿಕಾರಿಗಳನ್ನು ಸಂಪರ್ಕಿಸಿ ವ್ಯಕ್ತಿಯೊಬ್ಬ ಕಣ್ಮರೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಪ್ರವಾಸೋಧ್ಯಮ ಚಟುವಟಿಕೆ ನಡೆಸುವ ಉಮೇಶ್ ಜಿ ಅವರ ನೆರವು ಪಡೆದಿದ್ದು, ಅವರು 10 ಜನ ಈಜುಗಾರರನ್ನು ಕಳುಹಿಸಿದ್ದರು. ತಜ್ಞ ಈಜುಗಾರರ ಮೂಲಕ ನಸುಕಿನ 2ಗಂಟೆ ಅವಧಿಯಲ್ಲಿ ನೀರು ನುಗ್ಗಿದ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದಾಗ ಸುತ್ತಲೂ ನೀರಿರುವ ದ್ವೀಪದಲ್ಲಿ ಜನ್ನು ಕಾಣಿಸಿದ್ದು, ಬುಧವಾರ ಬೆಳಗ್ಗೆ ಅವರನ್ನು ಸುರಕ್ಷಿತವಾಗಿ ಮನೆಗೆ ಬಿಡಲಾಗಿದೆ.