`ಆತನೇ ಬೇಕು’ ಎಂದು ಅಂಕೋಲಾದ ಸಂಕೇತ್ ಆಚಾರಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಹೊನ್ನಾವರದ ರಮ್ಯಾ ಆಚಾರಿ ಅವರು ಮದುವೆಯಾದ ಮೂರುವರೆ ತಿಂಗಳೊಳಗೆ ಎಲ್ಲರಿಂದಲೂ ದೂರವಾಗಿದ್ದಾರೆ. `ಸಮಸ್ಯೆಗೆ ಸಾವೇ ಔಷಧವಲ್ಲ’ ಎಂಬುದನ್ನು ಅರಯದೇ ಅವರು `ಈ ಬದುಕೇ ಸಾಕು’ ಎಂದು ನಿರ್ಣಯಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೊನ್ನಾವರದ ಮುಗ್ವಾ ಆರೋಳ್ಳಿಯಲ್ಲಿ ರಮ್ಯಾ ಆಚಾರಿ (24) ಅವರು ವಾಸವಾಗಿದ್ದರು. ಅವರ ತಂದೆ ಗಣೇಶ ಆಚಾರಿ ಅವರು ಚಾಲಕರಾಗಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. `ವಯಸ್ಸಿಗೆ ಬಂದ ಮಗಳಿಗೆ ಮದುವೆ ಮಾಡಬೇಕು’ ಎಂಬ ಆಲೋಚನೆಯಲ್ಲಿದ್ದ ಗಣೇಶ ಆಚಾರಿ ಅವರಿಗೆ ಮಗಳ ಪ್ರೀತಿ ವಿಷಯ ತಿಳಿಯಿತು. ಅಂಕೋಲಾ ಹಟ್ಟಿಕೇರಿಯ ಸಂಕೇತ ಆಚಾರಿ ಹಾಗೂ ರಮ್ಯಾ ಆಚಾರಿ ಪರಸ್ಪರ ಪ್ರೇಮಿಸುತ್ತಿರುವುದನ್ನು ಅರಿತ ಗಣೇಶ ಆಚಾರಿ ಅವರು ಅವರ ಮದುವೆಗೆ ಒಪ್ಪಿಗೆ ನೀಡಿದರು.
ಗುರು-ಹಿರಯರ ಸಮ್ಮುಖದಲ್ಲಿ ಅತ್ಯಂತ ಸಂಪ್ರದಾಯಬದ್ಧವಾಗಿ ಅವರಿಬ್ಬರ ವಿವಾಹ ಮಾಡಿಸಿದರು. 2025ರ ಏಪ್ರಿಲ್ 21ರಂದು ಸಂಕೇತ ಆಚಾರಿ ಹಾಗೂ ರಮ್ಯಾ ಆಚಾರಿ ಸತಿ-ಪತಿಗಳಾದರು. ನೂರಾರು ಬಂಧು-ಮಿತ್ರರು ನೂತನ ದಂಪತಿಯನ್ನು ಹರಸಿ ಹಾರೈಸಿದರು. ಅದಾದ ನಂತರ ಸಂಕೇತ ಆಚಾರಿ ಹಾಗೂ ರಮ್ಯಾ ಆಚಾರಿ ಅಂಕೋಲಾದ ಹಟ್ಟಿಕೇರಿಯಲ್ಲಿರುವ ಮನೆಯಲ್ಲಿ ಅನ್ಯೋನ್ಯವಾಗಿದ್ದರು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಈ ಎಲ್ಲದರ ನಡುವೆ ಅಗಸ್ಟ 19ರಂದು ಗಣೇಶ ಆಚಾರಿ ಅವರಿಗೆ ಫೋನ್ ಮೂಲಕ ಆಘಾತಕಾರಿ ಸುದ್ದಿಯೊಂದು ಬಂದಿತು. ಮಗಳನ್ನು ನೋಡಲು ಅವರು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದರು. ಆದರೆ, ಅಲ್ಲಿ ಗಣೇಶ ಆಚಾರಿ ಅವರ ಪುತ್ರಿ ರಮ್ಯಾ ಆಚಾರಿ ಶವವಾಗಿದ್ದರು. ಯಾರಿಗೂ ಗೊತ್ತಿಲ್ಲದ ವಿಷಯವೊಂದನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದ ರಮ್ಯಾ ಆಚಾರಿ ಬದುಕಿನ ಬಗ್ಗೆ ದುಡುಕು ನಿರ್ಧಾರ ಮಾಡಿದ್ದರು. ಮನೆಯಲ್ಲಿದ್ದ ಫ್ಯಾನಿಗೆ ವೇಲು ಸಿಕ್ಕಿಸಿಕೊಂಡು ಅವರು ನೇಣಿಗೆ ಶರಣಾಗಿದ್ದರು.
ರೂಮಿನಲ್ಲಿ ನೇತಾಡುತ್ತಿದ್ದ ರಮ್ಯಾ ಆಚಾರಿ ಅವರನ್ನು ನೋಡಿದ ಸಂಕೇತ ಆಚಾರಿ ತಕ್ಷಣ ಅವರನ್ನು ಕೆಳಗಿಳಿಸಿದರು. ರಮ್ಯಾ ಆಚಾರಿ ಅವರನ್ನು ಆಸ್ಪತ್ರೆಗೆ ಕರೆತಂದರು. ಆದರೆ, ಅಷ್ಟರೊಳಗೆ ರಮ್ಯಾ ಆಚಾರಿ ಅವರು ಶವವಾಗಿದ್ದರು. ಆ ಸಾವನ್ನು ವೈದ್ಯರು ದೃಢೀಕರಿಸಿದರು. ಮದುವೆ ಆದ ಹೊಸತರಲ್ಲಿಯೇ ಮಗಳ ಅಸಹಜ ಸಾವಿನಿಂದ ಗಣೇಶ ಆಚಾರಿ ಕುಗ್ಗಿದರು. ಸಾವಿನ ನೈಜ ಕಾರಣ ತಿಳಿಯುವುದಕ್ಕಾಗಿ ಅನುಮಾನವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದರು. ಅಂಕೋಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸಾವಿನ ಕಾರಣ ಹುಡುಕುತ್ತಿದ್ದಾರೆ.
Discussion about this post