ಯಲ್ಲಾಪುರ: ಗುರುವಾರ ತಾ.ಪಂ ಸಭಾಭವನದಲ್ಲಿ ನಡೆದ 2023-24 ನೇ ಸಾಲಿನ ಜಮಾಬಂಧಿ ಸಭೆಗೆ ಒಬ್ಬರೇ ಒಬ್ಬ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಜನರು ಸಹ ಈ ಸಭೆಯಲ್ಲಿ ಭಾಗವಹಿಸಲು ಉತ್ಸಾಹ ತೋರಲಿಲ್ಲ. ಸರ್ಕಾರದ ಯೋಜನೆ ಹಾಗೂ ಅಧಿಕೃತ ಲೆಕ್ಕಪತ್ರಗಳ ಮಾಹಿತಿ ನೀಡುವ ಜಮಾಬಂಧಿ ಬಗ್ಗೆ ತಾಲೂಕು ಪಂಚಾಯತ ಪ್ರಚಾರ ನಡೆಸದಿರುವುದೇ ಇದಕ್ಕೆ ಮುಖ್ಯ ಕಾರಣ!
`ಸರಕಾರದ ಕಾರ್ಯಕ್ರಮಗಳು ಪಾರದರ್ಶಕವಾಗಿ ನಡೆಯಬೇಕು ಎಂಬ ನಿಟ್ಟಿನಲ್ಲಿ ಜಮಾಬಂಧಿ ಸಭೆ ಮಾಡಲಾಗುತ್ತದೆ\’ ಎಂದು ಜಮಾಬಂಧಿಯ ನೋಡಲ್ ಅಧಿಕಾರಿ ಅಧಿಕಾರಿ ಬಿ.ಪಿ.ಸತೀಶ ಸಭೆಯಲ್ಲಿ ಹೇಳಿದರು. `ಸ್ಪಂದನಶೀಲ ಆಡಳಿತವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸಭೆ ನಡೆಸಲಾಗಿದ್ದು, ಕಳೆದ ವರ್ಷದ ಎಲ್ಲಾ ಕಾಮಗಾರಿಗಳು ಪಾರದರ್ಶಕವಾಗಿದೆ\’ ಎಂದರು. ಆದರೆ, ಪಾರದರ್ಶಕತೆಯ ಬಗ್ಗೆ ಅರಿತುಕೊಳ್ಳಲು ಆಸಕ್ತಿ ಇದ್ದವರಾರು ಈ ಸಭೆಯಲ್ಲಿ ಕಾಣಲಿಲ್ಲ. ಲೆಕ್ಕಪತ್ರಗಳ ಬಗ್ಗೆಯೂ ಒಬ್ಬರೂ ಪ್ರಶ್ನಿಸಲಿಲ್ಲ.
ತಾ.ಪಂ ಸಹಾಯಕ ಲೆಕ್ಕಾಧಿಕಾರಿ ಎಂ.ಡಿ.ಮೋಹನ ಕಳೆದ ಸಾಲಿನ ಕಾಮಗಾರಿಗಳ ವಿವರ ನೀಡಿದರು. ತಾಪಂ ಆಡಳಿತಾಧಿಕಾರಿ ನಟರಾಜ್ ಟಿ ಎಚ್, ಇಒ ರಾಜೇಶ್ ಧನವಾಡಕರ್, ವ್ಯವಸ್ಥಾಪಕ ರಾಮದಾಸ ನಾಯಕ, ಯೋಜನಾಧಿಕಾರಿ ರಾಘವ, ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ, ವಿಷಯ ನಿರ್ವಾಹಕ ಪರಶುರಾಮ, ಗಣಪತಿ ಭಾಗ್ವತ, ಮಮತಾ ಇತರರಿದ್ದರು. ಬಿಇಒ ಎನ್.ಆರ್.ಹೆಗಡೆ, ಜಿ.ಪಂ ಎಇಇ ಅಶೋಕ ಬಂಟ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
S News Digital