ಅoಕೋಲಾದ ಕೇಣಿಯಲ್ಲಿ ಖಾಸಗಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ರಾಷ್ಟ್ರೀಯ ಮೀನುಗಾರರ ಸಂಘಟನೆ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮೀನುಗಾರ ಸಂಘಟನೆಯವರು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ಈ ಬಗ್ಗೆ ಕ್ರಮಕ್ಕಾಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ.
ಇದರೊಂದಿಗೆ ಸರ್ಕಾರ ನಡೆಸುವ ಅಹವಾಲು ಸಭೆಯಲ್ಲಿ ಮೀನುಗಾರರಿಗೆ ಮಾತನಾಡಲು ಮುಕ್ತ ಅವಕಾಶ ಕೊಡಬೇಕು ಎಂದು ಸಂಘಟನೆಯವರು ಜಿಲ್ಲಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದಾರೆ. `ಕೇಣಿ ಬಂದರು ಯೋಜನೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಅನ್ಯಾಯವಾಗಲಿದೆ. ಪರಿಸರ ಮತ್ತು ಜೀವ ವೈವಿಧ್ಯತೆಗೆ ಧಕ್ಕೆ ಆಗಲಿದೆ. ಜನರ ಆರೋಗ್ಯಕ್ಕೆ ಹಾಗೂ ಜನಜೀವನಕ್ಕೆ ಸಮಸ್ಯೆ ಆಗಲಿದೆ’ ಎಂದು ಎಂದು ಸಂಘಟನೆಯ ರಾಜ್ಯಕಾರ್ಯದರ್ಶಿ ಚಂದ್ರಕಾoತ ಕೊಚರೇಕರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
`ಜನವಸತಿ ಪ್ರದೇಶಗಳ ಸುತ್ತಮುತ್ತ ಕಬ್ಬಿಣದ ಅದಿರು, ಕಲ್ಲಿದ್ದಲು ಮುಂತಾದ ವಿವಿಧ ಸರಕುಗಳ ಸಂಗ್ರಹ ಸಂಸ್ಕರಣೆ, ಆಮದು-ರಪ್ತಿನಂತ ವಹಿವಾಟು ನಡೆಸುವುದನ್ನು ಕೇಂದ್ರ ಸರ್ಕಾರ 2017ರಲ್ಲಿಯೇ ಕೆಂಪು ಪಟ್ಟಿಗೆ ಸೇರಿಸಿದೆ. ರಾಜ್ಯ ಜೀವ ವೈವಿಧ್ಯ ಮಂಡಳಿ ಸಹ 2020ರಲ್ಲಿ ಕೇಣಿ ಸುತ್ತಮುತ್ತಲಿನ ಸಮುದ್ರ ತೀರದ ಪ್ರದೇಶಗಳನ್ನು ವಿಶಿಷ್ಟ ಜೀವ ವೈವಿಧ್ಯಗಳ ತಾಣವೆಂದು ಗುರುತಿಸಿದೆ. ಈ ಬಂದರು ನಿರ್ಮಾಣದಿಂದ ಅವರ್ಸಾದಿಂದ ಗೋಕರ್ಣವರೆಗಿನ ಸುಮಾರು ಹತ್ತು ಸಾವಿರ ಮೀನುಗಾರರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ’ ಎಂದು ಮೀನುಗಾರ ಸಂಘಟನೆಯವರು ಆತಂಕವ್ಯಕ್ತಪಡಿಸಿದ್ದಾರೆ. `ಮೀನುಗಾರರಿಗೆ ಜೀವನ ಭದ್ರತೆ ಒದಗಿಸಿಕೊಡದೇ ಯೋಜನೆಯನ್ನು ಅನುಷ್ಠಾನ ಮಾಡುವದರಿಂದ ಮಾನವ ಹಕ್ಕುಗಳ ದಮನವಾಗಲಿದೆ’ ಎಂದು ಹೇಳಿದ್ದಾರೆ.
`ಕಾರವಾರ ಮತ್ತು ಬೇಲೆಕೇರಿಯಲ್ಲಿ ಈಗಾಗಲೇ ಎರಡು ವಾಣಿಜ್ಯ ಬಂದರು ಕಾರ್ಯನಿರ್ವಹಿಸುತ್ತಿದೆ. ಅವುಗಳಿಗೆ ನಿರೀಕ್ಷಿತ ಮಟ್ಟದ ವಾಣಿಜ್ಯ ವಹಿವಾಟು ವ್ಯವಹಾರ ಇಲ್ಲ. ಹೀಗಿರುವಾಗ ಹೊಸ ಬಂದರು ಅಗತ್ಯವೇನು? ಎಂದು ಸಂಘಟನೆಯ ರಾಜ್ಯಕಾರ್ಯದರ್ಶಿ ಚಂದ್ರಕಾoತ ಕೊಚರೇಕರ ಪ್ರಶ್ನಿಸಿದ್ದಾರೆ. ಕೇಣಿಯ ಹತ್ತಿರದಲ್ಲೇ ಸೀಬರ್ಡ ನೌಕಾನೆಲೆಯೂ ಇರುವುದರಿಂದ ಬಂದರಿನಿAದ ಭದ್ರತೆಗೆ ದಕ್ಕೆ ಆಗಲಿದೆ’ ಎಂಬ ವಿಷಯವನ್ನು ಮಂಡಿಸಿದ್ದಾರೆ. ಇನ್ನೂ ಅನೇಕ ವಿಷಯಗಳ ಬಗ್ಗೆ ಅವರು ಪತ್ರ ರವಾನಿಸಿದ್ದು, ಈ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲು ಮೀನುಗಾರರಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
Discussion about this post