ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರನ್ನು ಹುಡುಕಿಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಅವರ ಮಕ್ಕಳಿಗೆ ಪರಿಹಾರವೂ ಸಿಕ್ಕಿಲ್ಲ. ನೀಡಿದ ಭರವಸೆಯಂತೆ ಉದ್ಯೋಗವನ್ನು ಕೊಟ್ಟಿಲ್ಲ.
ರಾಜ್ಯ ಸರ್ಕಾರ ಶಿರೂರು ದುರಂತದಲ್ಲಿ ಸಾವನಪ್ಪಿದವರಿಗೆ 5 ಲಕ್ಷ ರೂ ಹಾಗೂ ಕೇಂದ್ರ ಸರ್ಕಾರ 2 ಲಕ್ಷ ರೂ ಪರಿಹಾರ ಘೋಷಿಸಿದೆ. ಆದರೆ, ದುರಂತದಲ್ಲಿ ಕಣ್ಮರೆಯಾದವರ ಕುಟುಂಬಕ್ಕೆ ಈ ಪರಿಹಾರ ಸಿಗುತ್ತಿಲ್ಲ. ಕಣ್ಮರೆಯಾದವರ ದೇಹ ಸಿಕ್ಕದರೆ ಮಾತ್ರ ಅವರ ಕುಟುಂಬಕ್ಕೆ ಪರಿಹಾರ ಸಿಗಲಿದ್ದು, ದೇಹ ಹುಡುಕುವ ಪ್ರಯತ್ನ ಸಹ ನಡೆದಿಲ್ಲ. ಹೀಗಾಗಿ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಕುಟುಂಬದವರು ಅತಂತ್ರರಾಗಿದ್ದಾರೆ.
ಇನ್ನೂ ನಾಪತ್ತೆ ಆದವರ ಕುಟುಂಬಕ್ಕೆ ಸಹ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದರು. ಆದರೆ, ಇದೀಗ ಆ ಕಾಯ್ದೆಯನ್ನು ಕೇಂದ್ರ ಸರ್ಕಾರ ಬದಲು ಮಾಡಬೇಕು ಎಂದು ಹೇಳುತ್ತಿದ್ದಾರೆ. ಕಣ್ಮರೆಯಾಗಿ 7 ವರ್ಷ ಕಳೆದರೆ ಮಾತ್ರ ಅವರ ಕುಟುಂಬಕ್ಕೆ ಪರಿಹಾರ ಸಿಗುತ್ತದೆ ಎಂಬುದು ಈಗಿನ ನಿಯಮ.
ಜಗನ್ನಾಥ ನಾಯ್ಕ ಅವರ ಒಬ್ಬ ಹೆಣ್ಣು ಮಗಳಿಗೆ ಕುಮಟಾ ಎಸಿ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಕುಮಟಾ ಉಪವಿಭಾಗಾಧಿಕಾರಿ ಭರವಸೆ ನೀಡಿದ್ದರು. ಕುಮಟಾ ವಿಭಾಗಾಧಿಕಾರಿ ಜಗನ್ನಾಥ ನಾಯ್ಕ ಅವರ ಮನೆಗೆ ತೆರಳಿ ಈ ಆಶ್ವಾಸನೆ ನೀಡಿದ್ದರು. ಆದರೆ, ಅದು ಈಡೇರಿಲ್ಲ.
ಶಾಸಕ ಸತೀಶ್ ಸೈಲ್ ಸಹ ಜಗನ್ನಾಥ ನಾಯ್ಕ ಅವರ ಕುಟುಂಬದ ಒಬ್ಬರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಜೊತೆಗೆ ಕೆಡಿಸಿಸಿ ಬ್ಯಾಂಕಿನಲ್ಲಿ ಸಹ ಇನ್ನೊಬ್ಬರಿಗೆ ಉದ್ಯೋಗ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಅಲ್ಲಿ ಎಲ್ಲಿಯೂ ಅವರಿಗೆ ಉದ್ಯೋಗ ಸಿಕ್ಕಿಲ್ಲ. ದೊಡ್ಡ ದೊಡ್ಡ ಜನರು ಹೇಳಿದ ಭರವಸೆಗಳನ್ನು ನಂಬಿ ಸಮಾಧಾನಗೊಂಡಿದ್ದ ಜಗನ್ನಾಥ ನಾಯ್ಕರ ಪುತ್ರಿಯರಾದ ಪಲ್ಲವಿ ಮನಿಷಾ ಹಾಗೂ ಕೃತಿಕಾರಿಗೆ ಇದೀಗ ನಿರಾಸೆಯಾಗಿದೆ.
ಜು 16ರಂದು ಶಿರೂರು ಗುಡ್ಡ ಕುಸಿತದಲ್ಲಿ ಜಗನ್ನಾಥ ನಾಯ್ಕ ನಾಪತ್ತೆಯಾಗಿದ್ದರು. ತಮ್ಮ ಭಾವ ಲಕ್ಷ್ಮಣ ನಾಯ್ಕ ಅವರ ಚಹಾ ಅಂಗಡಿಗೆ ಅವರಿಗೆ ಸಹಾಯ ಮಾಡುವ ಸಲುವಾಗಿ ಜಗನ್ನಾಥ ನಾಯ್ಕ ಅಲ್ಲಿ ತೆರಳಿದ್ದರು. ಗುಡ್ಡ ಕುಸಿತದ ರಭಸಕ್ಕೆ ಅವರು ಬದುಕಿರುವ ಸಾಧ್ಯತೆಗಳಿಲ್ಲ. ಕಣ್ಮರೆಯಾದವರ ಶವ ಹುಡುಕಲು ಸಹ ಈವರೆಗೆ ಸಾಧ್ಯವಾಗಿಲ್ಲ.