ಉತ್ತರ ಕನ್ನಡ ಜಿಲ್ಲೆಯ ಕಾಡು ಹಾಗೂ ಇಲ್ಲಿರುವ ಸಿದ್ದಿ ಸಮುದಾಯದವರ ಸಂಸ್ಕೃತಿ-ಆಚರಣೆ ಪರಿಚಯಿಸುವ `ದೇವಸಸ್ಯ’ ಚಿತ್ರದ ಹಾಡೊಂದು ಬಾರೀ ಪ್ರಮಾಣದ ಸದ್ದು ಮಾಡುತ್ತಿದೆ. ಯೂಟೂಬ್’ನಲ್ಲಿ ವಿಡಿಯೋ ಕಾಣಿಸಿದ 20 ತಾಸಿನಲ್ಲಿ 27 ಸಾವಿರಕ್ಕೂ ಅಧಿಕ ವೀಕ್ಷಣೆಪಡೆದಿದೆ. ಆ ವಿಡಿಯೋ ನೋಡಿ.. ಇನ್ನಷ್ಟು ವಿಷಯ ಮುಂದೆ ಓದಿ..
ಶಿರಸಿ-ಮಂಚಿಕೇರಿ-ಯಲ್ಲಾಪುರದ ಸಿದ್ದಿ ಸಮುದಾಯದ ಜನರನ್ನು ಮುಖ್ಯ ಗುರಿಯನ್ನಾಗಿಸಿಕೊಂಡು `ದೇವಸಸ್ಯ’ ಚಿತ್ರ ನಿರ್ಮಿಸಲಾಗಿದೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಉತ್ತರ ಕನ್ನಡ ಜಿಲ್ಲೆಯ ಜನ ಜೀವನವನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಚಿತ್ರ ಹಲವು ವಿಷಯಗಳನ್ನು ಒಳಗೊಂಡಿದೆ. ಕುತೂಹಲಭರಿತ ಕಥೆಯನ್ನು ಆಧರಿಸಿದ ಈ ಚಿತ್ರ ಅನೇಕ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಹಾಡು ನೋಡಿದ ಜನ ಸಿನಿಮಾ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ.
ಅಪರೂಪದ ಗಿಡ ಹಾಗೂ ಅದರ ಸುತ್ತ ನಡೆಯುವ ವಿದ್ಯಮಾನವನ್ನು ಆಧರಿಸಿ ಚಿತ್ರದ ಕಥೆ ಹಣೆಯಲಾಗಿದೆ. ಪ್ರಾದೇಶಿಕ ಆಚರಣೆ, ನಂಬಿಕೆ, ನೆಲ ಮೂಲದ ಕಥೆಯನ್ನು ಬಿಂಬಿಸುವ ಚಿತ್ರದಂತೆ ಇದು ಭಾಸವಾಗುತ್ತಿದೆ. ಬಹುತೇಕ ಉತ್ತರ ಕನ್ನಡ ಜಿಲ್ಲೆಯ ಕಲಾವಿದರೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿನ ಕಲಾವಿದರ ಪ್ರತಿಭೆ ಅನಾವರಣಕ್ಕೆ `ದೇವಸಸ್ಯ’ ವೇದಿಕೆಯಾಗಿದೆ. ಕಾಡು-ಊರಿನ ನಡುವೆ ಸೆಟ್ ಹಾಕಿ ನಿರ್ಮಿಸಿದ ಈ ಚಿತ್ರ ಪ್ರೇಕ್ಷಕರನ್ನು 1995ರ ಅವಧಿಗೆ ಕರೆದೊಯ್ಯುತ್ತದೆ. ಸದ್ಯ ಬಿಡುಗಡೆ ಆಗಿರುವ ಹಾಡು ಎಣ್ಣೆ ಕಂಬಳ, ಗುಡುಗುಡಿ ಮಂಡಳ, ಓಸಿ ಚೀಟಿಗಳನ್ನು ಈ ಹಾಡು ಸುತ್ತುವರೆದಿದೆ. `ಗಡಬಡೆ ಮಾಡಿ ಬಾನಗೇಡಿ’ ಆದ ಬಗ್ಗೆ ತಿಳಿಸುವುದರ ಮೂಲಕ ಕಾನೂನು ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ.
ದೇವಸಸ್ಯ ಚಿತ್ರಕ್ಕಾಗಿ ಕಾರ್ತಿಕ ಭಟ್ಟ ಅವರು ಚಿತ್ರಕತೆ ಹಾಗೂ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಅನಂತ ಪಿಲಂ ಅಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನಂತಮೂರ್ತಿ ಹೆಗಡೆ ಬಂಡವಾಳ ಹೂಡಿದ್ದಾರೆ. ರವಿ ಮೂರೂರು ಹಾಗೂ ಹರಿ ಅಜಯ್ ಅವರ ಸಂಗೀತ ಹಾಡಿನ ಮೂಲಕ ಅನಾವರಣಗೊಂಡಿದೆ. ಎಂ ಎನ್ ರಾಜು ಅವರ ಕ್ಯಾಮರಾ ಚಳಕ ಗಮನಸೆಳೆಯುತ್ತಿದೆ.
Discussion about this post