`ಪ್ರತಿಯೊಬ್ಬರು ಜೀವನದ ಉದ್ದಕ್ಕೂ ಧರ್ಮವನ್ನು ಅನುಸರಿಸಬೇಕು. ಆಗ ಜೀವನದ ಕೊನೆಯ ಪರೀಕ್ಷೆ ಸುರಳಿತವಾಗಲಿದೆ’ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
`ಧರ್ಮದಲ್ಲಿ ಎಲ್ಲರಿಗೂ ನಿರಂತರ ಆಸಕ್ತಿ ಇರಬೇಕು. ಧರ್ಮವನ್ನು ಅನುಸರಿಸಲು ಎಚ್ಚರಿಕೆಬೇಕು. ಧರ್ಮವೇ ಪರಲೋಕದಲ್ಲಿ ಬಂಧು-ಬಳಗ’ ಎಂದವರು ಹೇಳಿದ್ದಾರೆ. `ಧರ್ಮವೇ ಗಟ್ಟಿಯಾದ ಪುರುಷಾರ್ಥ. ಧರ್ಮದ ಸಂಪಾದನೆಗೆ ಅತ್ಯಂತ ಮಹತ್ವ ಕೊಡಬೇಕು. ಇಹ, ಪರಗಳಲ್ಲಿ ನಮ್ಮನ್ನು ರಕ್ಷಿಸುತ್ತದೆ. ಎಲ್ಲಕ್ಕಿಂತ ಹೆಚ್ಚಿನದಾಗಿ ಜೀವನದ ಕೊನೆಯ ಪರೀಕ್ಷೆಯಲ್ಲಿ ಉತ್ತಮವಾಗಿ ತೇರ್ಗಡೆ ಹೊಂದಲು ಸಾಧ್ಯ’ ಎಂಬ ಮಾತನ್ನು ಅವರು ಪುನರುಚ್ಚರಿಸಿದ್ದಾರೆ.
`ಜೀವನದ ಕೊನೆಯ ಪರೀಕ್ಷೆಯಾದ ಮರಣವು ಸರಿಯಾಗಿ ಆಗಬೇಕಾದರೆ ಜೀವನದ ಉದ್ದಕ್ಕೂ ಧರ್ಮದ ಆಚರಣೆ ಮಾಡಿಕೊಂಡಿರಬೇಕು. ಜೀವನದ ಪರೀಕ್ಷೆಯಲ್ಲಿ ಮೊದಲಿಂದಲೂ ಪ್ರಯತ್ನ ಸರಿಯಾಗಿ ಮಾಡಬೇಕು. ಮೊದಲು ಮಾಡಿದ ಸಿದ್ಧತೆಗಳಲ್ಲೆವು ಪರೀಕ್ಷೆಯ ಹೊತ್ತಿಗೆ ಸಿದ್ಧತೆ ಕೊರತೆಯ ಕಾರಣ ಹಿಂದೆ ಮಾಡಿದ ಸಾಧನೆಗಳು ಅರ್ಧ ನಮ್ಮ ಕೈ ಬಿಟ್ಟು ಹೋಗಿಬಿಡುತ್ತವೆ’ ಎಂದವರು ಹೇಳಿದ್ದಾರೆ.
`ಮರಣದ ಕ್ಷಣ ಬಂದಾಗ ಎಲ್ಲವೂ ದುರ್ಬಲವಾಗುತ್ತದೆ. ಹಾಗೆ ಆಗದಿರಲು ಹೆಚ್ಚಿಗೆ ಸಾಧನೆ ಮಾಡಿಕೊಂಡಿರಬೇಕು. ಶರೀರ ದುರ್ಬಲವಾದ ಸ್ಥಿತಿಯಲ್ಲಿ ಮರಣ ಬರುತ್ತದೆ. ಆ ಸ್ಥಿತಿಯಲ್ಲಿ ಶರೀರ ಮತ್ತು ಮನಸ್ಸು ತುಂಬಾ ದುರ್ಬಲವಾಗಿ ಬಿಡುತ್ತವೆ. ಹಿಂದೆ ಮಾಡಿದ ಸಾಧನೆಗಳು ಕಮ್ಮಿಯೇ ಆಗುತ್ತವೆ. ಆದರೆ ಭಗವಂತನ ಮಾತಿನಂತೆ ಭಕ್ತಿ ಮತ್ತು ಅಭ್ಯಾಸ ಬಲವನ್ನು ಜೀವನದುದ್ದಕ್ಕೂ ಮಾಡಿದರೆ ಮರಣವೆಂಬ ಪರೀಕ್ಷೆಯನ್ನು ಸರಿಯಾಗಿ ಮಾಡಲು ಸಾಧ್ಯ’ ಎಂದವರು ವಿವರಿಸಿದ್ದಾರೆ.
`ಭಗವಂತನು ಮರಣ ಎಂಬ ಪರೀಕ್ಷೆಯನ್ನು ಕೊಡುವ ಮೊದಲು ಸಣ್ಣ ಕಿರು ಪರೀಕ್ಷೆಯನ್ನು ಮಾಡುತ್ತಾನೆ. ಅನಾರೋಗ್ಯಗಳು, ಯಾವುದೋ ಸಮಸ್ಯೆಗಳು ಹೀಗೆ. ಇಂತಹ ಅನೇಕ ಸಣ್ಣ ಪರೀಕ್ಷೆಗಳನ್ನು ಮಾಡುತ್ತಾನೆ. ಅನಾರೋಗ್ಯಗಳು ಕಲಿಸುವ ಪಾಠ ಅನೇಕ. ಭಯವನ್ನು ನಿವಾರಣೆ ಮಾಡಿಕೊಳ್ಳಬೇಕು, ಶರೀರವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಕಲಿಸುತ್ತದೆ. ಆದರೆ ಆಗ ಕಲಿತ ಪಾಠವನ್ನು ಯಾವತ್ತೂ ಮರೆಯಬಾರದು. ಕೊನೆಯ ಪರೀಕ್ಷೆಯನ್ನು ಎದುರಿಸುವಾಗ ಒಬ್ಬನೇ ಎದುರಿಸುವುದು ಅನಿವಾರ್ಯ ಮತ್ತು ಸಹಜ’ ಎಂದರು.
`ಬದುಕಿನ ಗಂಭೀರ ಸಮಸ್ಯೆಗಳನ್ನು ಒಬ್ಬನೇ ಎದುರಿಸುವುದು ಸಹಜ. ಒಬ್ಬನೇ ಎದುರಿಸುವುದನ್ನು ಕಲಿಯಬೇಕು. ಆದರೆ ದೇವರು ಮಾತ್ರ ನಮ್ಮ ಜೊತೆಯಲ್ಲಿ ಇರುತ್ತಾನೆ. ಅವನೇ ನಮಗೆ ಆಧಾರ. ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ದೇವರನ್ನು ಇಟ್ಟುಕೊಂಡು ಸಂಕಷ್ಟಗಳನ್ನು ಒಬ್ಬನೇ ಎದುರಿಸಬೇಕು. ಇದನ್ನು ಅಭ್ಯಾಸ ಮಾಡಬೇಕು. ಜೀವನದ ಉದ್ದಕ್ಕೂ ಆಗಾಗ ಬರುವ ಉತ್ಕಟ ಕ್ಷಣಗಳನ್ನು ಎದುರಿಸಿ ಎದುರಿಸಿ ಅಭ್ಯಾಸ ಮಾಡುತ್ತಾ ದೇವರ ಭಕ್ತಿಯಿಂದ ಶಕ್ತಿ ಬರುತ್ತದೆ. ಆಮೇಲೆ ಮಾಡುತ್ತೇನೆ ಎಂದುಕೊoಡು ಬಿಡಬಾರದು. ಮೊದಲಿಂದಲೇ ಮಾಡುವುದನ್ನು ರೂಢಿಸಿಕೊಳ್ಳಬೇಕು’ ಎಂದರು.
`ಜೀವನದ ಉದ್ದಕ್ಕೂ ಧರ್ಮ ಸಾಧನೆ ಮಾಡಿದಾಗ ಬದುಕಿನ ಕೊನೆಯ ಪರೀಕ್ಷೆಯನ್ನು ಸರಿಯಾಗಿ ಎದುರಿಸಲು ಸಾಧ್ಯ. ಆದ್ದರಿಂದ ಎಲ್ಲರೂ ಕೂಡಾ ಜೀವನದ ಹೆಚ್ಚಿನ ಭಾಗವನ್ನು ಸಾಧನೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು. ಗುರುವಾರ ಚಿನ್ನಾಪುರ ಸೀಮೆಯ ಎರಡು ಭಾಗದ ಶಿಷ್ಯರು ಗಾಯತ್ರಿ ಜಪ, ಮಾತೆಯರು ಕುಂಕುಮಾರ್ಚನೆ ನಡೆಸಿದರು. ಮಠದ ಕಿರಿಯ ಸ್ವಾಮೀಜಿ ಶ್ರೀಆನಂದಬೋಧೇoದ್ರ ಸರಸ್ವತೀಮಹಾ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಪ್ರಮುಖರಾದ ನಾರಾಯಣ ಹೆಗಡೆ, ದತ್ತಾತ್ರೇಯ ಹೆಗಡೆ, ಸುಬ್ರಹ್ಮಣ್ಯ ಭಟ್, ರವೀಂದ್ರ ಕೊಮಾರ ಇತರರು ಇದ್ದರು .
Discussion about this post