ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 1467 ಗಣೇಶ ಮೂರ್ತಿ ಸ್ಥಾಪನೆಗೆ ಮಾತ್ರ ಅನುಮತಿ ಸಿಕ್ಕಿದೆ. ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ಪರವಾನಿಗೆಪಡೆಯುವುದು ಕಡ್ಡಾಯವಾಗಿದ್ದು, ಅನುಮತಿಪಡೆಯಲು ಇನ್ನೂ ಅವಕಾಶವಿದೆ.
`ಹಬ್ಬದ ಅಂಗವಾಗಿ ಧ್ವನಿವರ್ಧಕ ಬಳಸಲು ಅನುಮತಿಪಡೆಯಬೇಕು. ಆಸ್ಪತ್ರೆ, ಶಾಲೆ, ನ್ಯಾಯಾಲಯದ ಬಳಿ ಧ್ವನಿವರ್ಧಕ ಬಳಸಬಾರದು’ ಎಂಬ ಷರತ್ತು ವಿಧಿಸಿ ಪರವಾನಿಗೆ ಕೊಡಲಾಗುತ್ತಿದೆ. `ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು,. ಬೆಂಕಿ ಅವಗಡಗಳು ಸಂಭವಿಸಿದoತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪೆಂಡಾಲ್‌ಗಳ ಬಳಿ ಸ್ವಯಂ ಸೇವಕರನ್ನು ನಿಯೋಜಿಸಬೇಕು. ಮೂರ್ತಿ ವಿಸರ್ಜನೆ ವೇಳೆ ಈಜು ಬಾರದವರನ್ನು ಬಳಸಬಾರದು’ ಎಂಬ ಸೂಚನೆಯನ್ನು ಜಿಲ್ಲಾಡಳಿತ ನೀಡಿದೆ.
`ಡಿಜೆ ಬಳಕೆ ಮಾಡುವಂತಿಲ್ಲ. ರಾತ್ರಿ 10ರಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶವಿದ್ದು, ಶಾಂತಿಯುತವಾಗಿ ಗಣೇಶ ಹಬ್ಬವನ್ನು ಅಚರಣೆ ಮಾಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಹೇಳಿದ್ದಾರೆ. `ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಪಿಓಪಿ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸಿರುವ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ’ ಎಂಬ ಷರತ್ತುವಿಧಿಸಿ ಈ ಪರವಾನಿಗೆ ನೀಡಲಾಗುತ್ತಿದೆ. `ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಮತ್ತು ವಿಸರ್ಜನೆ ಸಮಯದಲ್ಲಿ ಯಾವುದೇ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡುವ ಹಾಗಿಲ್ಲ. ಬಟ್ಟೆಯಿಂದ ತಯಾರಿಸಿದ ಬ್ಯಾನರ್ ಮಾತ್ರ ಬಳಸಬೇಕು. ಪ್ಲೆಕ್ಸ್ ಬಳಸಬಾರದು. ಪೆಂಡಾಲ್‌ನಿರ್ಮಾಣ ಮತ್ತು ಅಲಂಕಾರದಲ್ಲಿಯೂ ಪ್ಲಾಸ್ಟಿಕ್ ಬಳಕೆ ಮಾಡಬಾರದು’ ಎಂದು ಸೂಚಿಸಲಾಗಿದೆ.
`ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಅವಧಿಯಲ್ಲಿ ವಿದ್ಯುತ್ ಲೈನ್‌ಗಳ ಸಂಪರ್ಕದಿoದ ಯಾವುದೇ ಅನಾಹುತ ಆಗದಂತೆ ಮುನ್ನಚ್ಚರಿಕೆವಹಿಸಬೇಕು. ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ವಿತರಿಸುವ ಆಹಾರ ಪದಾರ್ಥಗಳ ಬಗ್ಗೆ ಆಯೋಜಕರು ಹೆಚ್ಚಿನ ಮುತುವರ್ಜಿವಹಿಸಬೇಕು’ ಎಂದು ಸೂಚಿಸಲಾಗುತ್ತಿದೆ. `ಗಣೇಶ ಮೂರ್ತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಗುರುತಿಸಿರುವ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು, ಆ ಪ್ರದೇಶದಲ್ಲಿ ತ್ಯಾಜ್ಯ ಉತ್ಪತ್ತಿಯಾಗದಂತೆ ಸ್ಥಳೀಯಾಡಳಿತಗಳು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು’ ಎಂದು ಸೂಚಿಸಲಾಗಿದೆ. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಸಿಂಗಲ್ ವಿಂಡೋ ವ್ಯವಸ್ಥೆಯಡಿ ಎಲ್ಲಾ ಅಗತ್ಯ ಅನುಮತಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Discussion about this post