ಅಡಿಕೆ ಬೆಳೆಗಾರರು ನೂರಾರು ಬಗೆಯ ಸಮಸ್ಯೆ ಅನುಭವಿಸುತ್ತಿದ್ದು, ಅಡಿಕೆ ಬೆಳೆಗಾರ ಕ್ಷೇತ್ರದ ಸಂಸದರು ಈ ಸಮಸ್ಯೆಯ ಬಗ್ಗೆ ದೆಹಲಿಯಲ್ಲಿ ಮಾತನಾಡಿದ್ದಾರೆ. ಅಡಿಕೆ ಬೆಳೆಗಾರರ ಸಂಘದ ಪ್ರತಿನಿಧಿಗಳ ನಿಯೋಗರಚಿಸಿದ ಸಂಸದರು ಸಮಸ್ಯೆಗಳ ಬಗ್ಗೆ ವಿವಿಧ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಹ ಜಿಲ್ಲೆ ಪ್ರಮುಖ ಸಹಕಾರಿಗಳನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸಚಿವರನ್ನು ಭೇಟಿ ಮಾಡಿಸಿದ್ದಾರೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಸಂಸದರು ಹಾಗೂ ಅಡಿಕೆ ಬೆಳೆಗಾರರು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಪರಿಣಾಮವಾಗಿ ಅಡಿಕೆ ರೋಗಕ್ಕೆ ಬಾಧಿಸುತ್ತಿರುವ ಹಳದಿ ಎಲೆಚುಕ್ಕಿ ರೋಗ ಹಾಗೂ ಕೊಳೆ ರೋಗದ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆ ಸಮಗ್ರ ಅಧ್ಯಯನ ಅಗತ್ಯ ಎಂದು ಅಡಿಕೆ ಬೆಳೆಗಾರ ಕ್ಷೇತ್ರದ ಸಂಸದರು ಒತ್ತಾಯಿಸಿದ್ದು, ಮಾರಕ ರೋಗಗಳಿಗೆ ಶಾಶ್ವತ ಪರಿಹಾರ ಅಗತ್ಯ ಎಂದು ಹೇಳಿದ್ದಾರೆ.
`ಅಡಿಕೆ ಅಕ್ರಮ ಆಮದು ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಬೇಕು. ಅಡಿಕೆಯ ಅಕ್ರಮ ಆಮದನ್ನು ತಡೆಯಲು ಕಸ್ಟಮ್ಸ್ ವ್ಯವಸ್ಥೆಯನ್ನು ಬಲಪಡಿಸಬೇಕು’ ಎಂದು ಈ ನಿಯೋಗದವರು ಕೇಂದ್ರದ ಮೇಲೆ ಒತ್ತಡ ಹಾಕಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ಅಡಿಕೆಯಲ್ಲಿನ ತೇವಾಂಶ ಮಟ್ಟವನ್ನು ಶೇ 7ರಿಂದ ಶೇ11-12ಕ್ಕೆ ಹೆಚ್ಚಿಸುವಂತೆ ಎಫ್ಎಸ್ಎಸ್ಎಐಗೆ ಸಹ ಮನವಿ ಸಲ್ಲಿಸಿದ್ದಾರೆ. ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ನಿಗದಿಪಡಿಸಿರುವ ಅಡಿಕೆ ಗ್ರೇಡಿಂಗ್ ಮಾನದಂಡಗಳನ್ನು ಪುನರ್ ಪರಿಶೀಲಿಸಿ, ಸ್ಥಳೀಯ ಭೌಗೋಳಿಕ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳುವಂತೆಯೂ ನಿಯೋಗದವರು ಒತ್ತಾಯಿಸಿದ್ದಾರೆ.
ಜೊತೆಗೆ `ಸಹಕಾರಿ ಸಂಸ್ಥೆಗಳಿಗೆ ನೀಡುವ ಸಾಲಗಳ ಮೇಲಿನ ಬಡ್ಡಿದರ ಕಡಿಮೆ ಮಾಡಬೇಕು. ಇದಕ್ಕೆ ಹೊಸ ಮಾನದಂಡಗಳನ್ನು ರೂಪಿಸಬೇಕು. ಇದರಿಂದ ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಬೆಳೆ ನಷ್ಟದಿಂದ ರೈತರನ್ನು ರಕ್ಷಿಸಲು ಬೆಳೆ ವಿಮಾ ಸೌಲಭ್ಯಗಳನ್ನು ಬಲಪಡಿಸುವಂತೆಯೂ ನಿಯೋಗವು ಮನವಿ ಮಾಡಿದೆ. ಅಮೆರಿಕಾದಲ್ಲಿ ಅಡಿಕೆ ಎಲೆಗಳಿಂದ ಮಾಡಿದ ಬಯೋಡಿಗ್ರೇಡಬಲ್ ಪ್ಲೇಟ್ಗಳನ್ನು ಕ್ಯಾನ್ಸರ್ ಕಾರಕ ಎಂದು ಘೋಷಿಸಿರುವುದರಿಂದ ಉಂಟಾದ ರಫ್ತು ಸಮಸ್ಯೆಗಳನ್ನು ಬಗೆಹರಿಸಬೇಕು. ಕಾರ್ಬನ್ ಫೈಬರ್ ದೋಟಿ ಮತ್ತು ಇತರೆ ಕೃಷಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Discussion about this post