ಶಿರಸಿಯಲ್ಲಿ ಈ ದಿನ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬರು ಸಾವನಪ್ಪಿದ್ದಾರೆ. ಸ್ಕೂಟಿ ಹಾಗೂ ರಿಕ್ಷಾ ನಡುವೆ ಮೊದಲು ಡಿಕ್ಕಿಯಾಗಿದ್ದು, ನೆಲಕ್ಕೆ ಬಿದ್ದ ಸ್ಕೂಟಿ ಸವಾರನ ಮೇಲೆ ಟ್ರಕ್ ಹತ್ತಿದೆ. ಕ್ಷಣಮಾತ್ರದಲ್ಲಿಯೇ ಸ್ಕೂಟಿ ಸವಾರನ ಪ್ರಾಣ ಹಾರಿ ಹೋಗಿದೆ.
ಅಗಸ್ಟ 23ರ ಮಧ್ಯಾಹ್ನ ರಾಮನಬೈಲಿನ ಶ್ರೀರಾಮ ಕಾಲೋನಿಯ ಸ್ಟಾನಿಲಿ ಫರ್ನಾಂಡಿಸ್ ಅವರು ರಾಘವೇಂದ್ರ ಸರ್ಕಲಿನಿಂದ ಮಾರಿಕಾಂಬಾ ಶಾಲೆಯ ಕಡೆ ತಮ್ಮ ರಿಕ್ಷಾ ಓಡಿಸುತ್ತಿದ್ದರು. ಇದೇ ವೇಳೆ ಅಶ್ವಿನಿ ಸರ್ಕಲ್ ಕಡೆಯಿಂದ ಮಾರಿಕಾಂಬಾ ಶಾಲೆ ಕಡೆ ನಿಶಾಂತ ಬನ್ವಾರಿ ಸಿಂಗ್ ಚೌದ್ರಿ (20) ಅವರು ಸ್ಕೂಟಿ ಓಡಿಸಿಕೊಂಡು ಬರುತ್ತಿದ್ದರು. ರಿಕ್ಷಾ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾಯಿತು.
ಪರಿಣಾಮ ನಿಶಾಂತ ಬನ್ವಾರಿ ಸಿಂಗ್ ಚೌದ್ರಿ ಅವರ ಸ್ಕೂಟಿ ರಸ್ತೆಯ ಡಿವೈಡರಿಗೆ ಗುದ್ದಿತು. ನಿಶಾಂತ ಬನ್ವಾರಿ ಸಿಂಗ್ ಚೌದ್ರಿ ಅವರು ನೆಲಕ್ಕೆ ಅಪ್ಪಳಿಸಿದರು. ಈ ವೇಳೆ ಹುಬ್ಬಳ್ಳಿಯ ಜಾಪರಸಾಬ್ ಅವರು ರಾಘವೇಂದ್ರ ಸರ್ಕಲ್ ಬಳಿಯಿಂದ ಅಶ್ವಿನಿ ಸರ್ಕಲ್ ಕಡೆ ಶ್ರೀಕುಮಾರ ರೋಡ್ಲೈನ್ಸನ ಟ್ರಕ್ ಓಡಿಸಿಕೊಂಡು ಬಂದರು. ಆ ಟ್ರಕ್’ನ ಹಿಂದಿನ ಚಕ್ರ ನೆಲಕ್ಕೆ ಬಿದ್ದಿದ್ದ ಸ್ಕೂಟಿ ಸವಾರ ನಿಶಾಂತ ಬನ್ವಾರಿ ಸಿಂಗ್ ಚೌದ್ರಿ ಅವರ ಮೈಮೇಲೆ ಹತ್ತಿತು. ಸ್ಥಳದಲ್ಲಿಯೇ ಅವರು ಪ್ರಾಣಬಿಟ್ಟರು.
ನಿಶಾಂತ ಬನ್ವಾರಿ ಸಿಂಗ್ ಚೌದ್ರಿ ಅವರು ಐಟಿಐ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರು. ತಮ್ಮ ಮನೆಯಲ್ಲಿ ಸ್ವೀಟ್ ತಯಾರಿಸಿ ಅದನ್ನು ಬೇರೆ ಅಂಗಡಿಯೊoದಕ್ಕೆ ಕೊಡಲು ಹೋಗುತ್ತದ್ದರು. ಈ ವೇಳೆ ಅಪಘಾತ ನಡೆದು, ಅವರು ಸಾವನಪ್ಪಿದರು. ಮರಾಠಿಕೊಪ್ಪ ಪುಟ್ಟನಮನೆಯ ಚಾಲಕ ಪ್ರದೀಪ ನಾಯ್ಕ ಅವರು ನೀಡಿದ ದೂರಿನ ಪ್ರಕಾರ ಪೊಲೀಸರು ರಿಕ್ಷಾ ಚಾಲಕ ಹಾಗೂ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
