ಗಣೇಶ ಹಬ್ಬದ ಅಂಗವಾಗಿ ಬಗೆ ಬಗೆಯ ಬಹುಮಾನಗಳನ್ನು ಹೊಂದಿದ ಲಾಟರಿ ಟಿಕೆಟ್ ಮುದ್ರಿಸಿದ್ದ ಹೊನ್ನಾವರದ ವಿನಾಯಕ ಮುಕ್ರಿ ಊರು ಬಿಟ್ಟು ಓಡಿ ಹೋಗಿದ್ದಾರೆ. ಅವರು ಮಾರಾಟ ಮಾಡಿದ ಲಾಟರಿ ಟಿಕೆಟ್ ಸಹ ಅನಧಿಕೃತವಾಗಿದ್ದು, ಅದನ್ನು ಖರೀದಿಸಿದವರಿಗೂ ಅವರು ಮೂರು ನಾಮ ಹಾಕಿದ್ದಾರೆ!
ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧಿಸಿದೆ. ಆ ಬಗ್ಗೆ ಅರಿವಿದ್ದರೂ ಹೊನ್ನಾವರದ ಕರ್ಕಿ ಕೋಣಕಾರದ ವಿನಾಯಕ ಮುಕ್ರಿ ಅವರು ಲಾಟರಿ ಟಿಕೆಟ್ ಮುದ್ರಿಸಿದ್ದರು. ಸಾರ್ವಜನಿಕ ಗಣೇಶ ಉತ್ಸವದ ಹೆಸರಿನಲ್ಲಿ ಅವರು ಲಾಟರಿ ಟಿಕೆಟ್ ಮಾರಾಟ ಮಾಡಿದ್ದರು. ಸಾರ್ವಜನಿಕ ಗಣೇಶೋತ್ಸವದ ಬಂಪರ್ ಲಾಟರಿ ಎಂದು ಜನರನ್ನು ನಂಬಿಸಿ ಅವರು ಹಣಪಡೆಯುತ್ತಿದ್ದರು. ನಿಷೇಧಿತ ಲಾಟರಿ ಆಸೆ ತೋರಿಸಿ ಜನರಿಂದ ಅಕ್ರಮವಾಗಿ ಹಣ ಸಂಪಾದಿಸಲು ಅವರು ಉದ್ದೇಶಿಸಿದ್ದರು.
ವಿವಿಧ ಆಸೆ-ಆಮೀಷಕ್ಕೆ ಒಳಗಾದ ಕೆಲವರು ಆ ಲಾಟರಿ ಟಿಕೆಟ್‌ಪಡೆದು ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದರು. ಅದರಂತೆ, ಅಗಸ್ಟ 23ರಂದು ಕರ್ಕಿಯ ಕೋಣಕಾರದಲ್ಲಿ ವಿನಾಯಕ ಮುಕ್ರಿ ಅವರು ಗಣೇಶ ಉತ್ಸವದ ಲಾಟರಿ ಮಾರಾಟದಲ್ಲಿ ತೊಡಗಿದ್ದರು. ಆ ವೇಳೆ ಪೊಲೀಸ್ ನಿರೀಕ್ಷಕ ಸಿದ್ಧರಾಮೇಶ್ವರ ಎಸ್ ಅವರು ಅಲ್ಲಿಗೆ ಬಂದಿದ್ದು, ಪೊಲೀಸರನ್ನು ನೋಡಿದ ವಿನಾಯಕ ಮುಕ್ರಿ ಲಾಟರಿ ಚೀಟಿಗಳನ್ನು ಅಲ್ಲಿಯೇ ಎಸೆದು ಪರಾರಿಯಾದರು.
ಅದಾಗಿಯೂ ಪೊಲೀಸರು ವಿನಾಯಕ ಮುಕ್ರಿ ಅವರ ಬಂಧನಕ್ಕಾಗಿ ಹುಡುಕಾಟ ನಡೆಸಿದರು. ಅಕ್ರಮ ಲಾಟರಿ ಮಾರಿದ್ದರಿಂದ ತಮಗಾಗುವ ಶಿಕ್ಷೆ ಬಗ್ಗೆ ಅರಿತ ವಿನಾಯಕ ಮುಕ್ರಿ ಊರು ಬಿಟ್ಟು ಓಡಿದರು. ಬಿದ್ದಿದ್ದ ಲಾಟರಿ ಪುಸ್ತಕವನ್ನು ಸಾಕ್ಷಿಯಾಗಿ ಪರಿಗಣಿಸಿದ ಪೊಲೀಸರು ಲಾಟರಿ ಮಾರಾಟಗಾರ ವಿನಾಯಕ ಮುಕ್ರಿ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
Discussion about this post