ಶಿರಸಿಯ ಐದು ರಸ್ತೆ ಬಳಿ 1990ರಲ್ಲಿ ನಡೆದ ಹೊಡೆದಾಟ ಪ್ರಕರಣವನ್ನು ಜಾಲಾಡಿದ ಪೊಲೀಸರು ದೆಹಲಿಯಲ್ಲಿ ಅಡಗಿದ್ದ ಆರೋಪಿಯನ್ನು ಇದೀಗ ಬಂಧಿಸಿದ್ದಾರೆ. 35 ವರ್ಷಗಳ ನಂತರ ಹಲ್ಲೆ ಮಾಡಿದ ಆರೋಪಿ ಸಿಕ್ಕಿ ಬಿದ್ದಿದ್ದು, ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದ್ದಾರೆ.
1990ರಲ್ಲಿ ಶಿರಸಿಯ ಐದು ರಸ್ತೆ ಬಳಿ ಹೊಡೆದಾಟ ನಡೆದಿತ್ತು. ಕುಮಟಾ ಅಗಸೆಬಾಗಿಲಿನ ದೀಪಕ ಭಂಡಾರಿ ಎಂಬಾತರು ದಿನಕರ ಶೆಟ್ಟಿ ಎಂಬಾತರ ಮೇಲೆ ಹಲ್ಲೆ ಮಾಡಿದ್ದರು. ಈ ಬಗ್ಗೆ ದಿನಕರ ಶೆಟ್ಟಿ ಅವರ ತಂದೆ ನಾರಾಯಣ ಶೆಟ್ಟಿ ಅವರು ಆ ದಿನವೇ ಪೊಲೀಸ್ ದೂರು ನೀಡಿದ್ದರು.
ಪೊಲೀಸ್ ದೂರು ದಾಖಲಾದ ವಿಷಯ ಅರಿತು ದೀಪಕ ಭಂಡಾರಿ ಊರು ಬಿಟ್ಟು ಓಡಿದ್ದರು. ಪೊಲೀಸರು ದೀಪಕ ಭಂಡಾರಿ ಅವರನ್ನು ಹುಬ್ಬಳ್ಳಿ, ಮಂಗಳೂರು, ಬೆಂಗಳೂರು ಸೇರಿ ವಿವಿಧ ಕಡೆ ಹುಡುಕಿದ್ದರು. ವಿಶೇಷ ತಂಡ ರಚಿಸಿ ಹುಡುಕಿದರೂ ದೀಪಕ ಭಂಡಾರಿ ಸಿಕ್ಕಿರಲಿಲ್ಲ.
ದೀಪಕ ಭಂಡಾರಿ ನವದೆಹಲಿಯಲ್ಲಿ ವೇಷ ಮರೆಸಿಕೊಂಡು ಜೀವನ ನಡೆಸುತ್ತಿದ್ದರು. ಆ ದಿನ ನಡೆದಿದ್ದ ಹೊಡೆದಾಟ ಪ್ರಕರಣವನ್ನು ಎಲ್ಲರೂ ಮರೆತಿದ್ದರು. ಆದರೆ, ಪೊಲೀಸ್ ದಾಖಲೆಗಳಿಂದ ಆ ಪ್ರಕರಣ ಅಳಸಿರಲಿಲ್ಲ. 35 ವರ್ಷಗಳ ನಂತರ ದೀಪಕ ಭಂಡಾರಿ ನವದೆಹಲಿಯಿಂದ ದಾಂಡೇಲಿಗೆ ಬರುತ್ತಿದ್ದರು.
ಈ ಬಗ್ಗೆ ಅರಿತ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ನಾಯ್ಕ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ ಅವರಿಗೆ ವಿಷಯ ಮುಟ್ಟಿಸಿದರು. ಕಾರವಾರದ ತಾಂತ್ರಿಕ ವಿಭಾಗದ ಉದಯ ಗುನಗಾ, ಬಬನ ಕದಂ ಸೇರಿ ದೀಪಕ ಭಂಡಾರಿ ಬರುವ ದಾರಿ ಪತ್ತೆ ಮಾಡಿದರು. ಶಿರಸಿ ಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ನಾಗಪ್ಪ ಬಿ, ನಾರಾಯಣ ರಾಥೋಡ್ ಜೊತೆ ಸೇರಿ ಕಾರ್ಯಾಚರಣೆಗಿಳಿದರು.
ಪೊಲೀಸ್ ಸಿಬ್ಬಂದಿ ಹನುಮಂತ ಕಬಾಡಿ, ತುಕಾರಾಮ ಬಣಗಾರ, ರಾಮಯ್ಯ ಪೂಜಾರಿ, ಸದ್ದಾಂ ಹಸೆನ್, ಚನ್ನಬಸಪ್ಪ ಕ್ಯಾರಗಟ್ಟಿ ಹಾಗೂ ಹನುಮಂತ ಮಕಾಪುರ ಅವರು ಒಟ್ಟಾಗಿ ದೀಪಕ ಭಂಡಾರಿ ಅವರನ್ನು ವಶಕ್ಕೆಪಡೆದರು. 35 ವರ್ಷದ ಅವಧಿಯಲ್ಲಿ ದೀಪಕ ಭಂಡಾರಿ ಸಾಕಷ್ಟು ಬದಲಾಗಿದ್ದರು. ಆದರೂ, ಪೊಲೀಸರು ಅವರನ್ನು ಗುರುತಿಸಿ ಜೈಲಿಗೆ ಕಳುಹಿಸಿದರು.
