ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿ ಉಚಿತ ಬಸ್ ಪ್ರಯಾಣ ಕಲ್ಪಿಸಿದರೂ ಯಲ್ಲಾಪುರದ ಬಿಸಗೋಡು ಭಾಗದವರಿಗೆ ಅದರಿಂದ ಪ್ರಯೋಜನವಾಗುತ್ತಿಲ್ಲ. ಕಾರಣ, ಆ ಊರಿಗೆ ಸಮಯಕ್ಕೆ ಸರಿಯಾಗಿ ಎಲ್ಲಾ ದಿನ ಬಸ್ಸೇ ಹೋಗುತ್ತಿಲ್ಲ!
ಪ್ರತಿ ದಿನ ಮಧ್ಯಾಹ್ನ 3 ಗಂಟೆಗೆ ಯಲ್ಲಾಪುರದಿಂದ ಬಳಗಾರಿಗೆ ಸರ್ಕಾರಿ ಬಸ್ ಸೇವೆ ಇದೆ. ಆದರೆ, ಈ ಬಸ್ಸು ವಾರಕ್ಕೆ ಮೂರು ದಿನ ಮಾತ್ರ ಬಿಸಗೋಡು ಪ್ರವೇಶಿಸುತ್ತದೆ. ಉಳಿದ ದಿನ ಬಿಸಗೋಡಿನ ಪ್ರಯಾಣಿಕರನ್ನು ಅರ್ದ ದಾರಿಗೆ ಬಿಡಲಾಗುತ್ತದೆ. ಸೋಮವಾರ ಸಹ ಮಹಿಳೆಯೊಬ್ಬರನ್ನು ಬಸ್ಸಿನ ಸಿಬ್ಬಂದಿ ಅರ್ದ ದಾರಿಗೆ ಇಳಿಸಿ ಮುಂದೆ ಹೋಗಿದ್ದಾರೆ. ನಂತರ ಅವರು ಕಾಡು ದಾರಿಯಲ್ಲಿ ಒಂಟಿಯಾಗಿ ಸಂಚರಿಸಿ ಮನೆ ಸೇರಿದ್ದಾರೆ.
ಈ ಬಸ್ಸು ಬಿಸಗೋಡಿಗೆ ಹೋಗದ ಕಾರಣ ಅಲ್ಲಿನ ಶಾಲಾ ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದಾರೆ. `ಯಾವ ದಿನ ಬಸ್ಸು ಊರಿಗೆ ಬರುತ್ತದೆ. ಯಾವ ದಿನ ಊರಿಗೆ ಬರುವುದಿಲ್ಲ’ ಎಂದು ನಿರ್ಧರಿಸುವುದೇ ಆ ಊರಿನವರಿಗೆ ಕಷ್ಟವಾಗಿದೆ. `ಕಳೆದ ವಾರ ಸಹ ಬಳಗಾರದಿಂದ ಹೊರಟ ಬಸ್ಸು ಬಿಸಗೋಡು ಪ್ರವೇಶಿಸದೇ ಯಲ್ಲಾಪುರದ ಕಡೆ ಸಾಗುತ್ತಿತ್ತು. ಆ ದಿನ ಶಾಲಾ ಶಿಕ್ಷಕರು ಹಾಗೂ ಊರಿನ ಜನ ಬಸ್ಸನ್ನು ಆನಗೋಡದಲ್ಲಿ ಅಡ್ಡಗಟ್ಟಿ ಮರಳಿ ಬಿಸಗೋಡಿಗೆ ಬರುವಂತೆ ಮಾಡಿದೆವು. ಈ ದಿನ ಮತ್ತೆ ಬಸ್ಸು ಬಿಸಗೋಡು ಪ್ರವೇಶಿಸದೇ ಹಾಗೇ ಯಲ್ಲಾಪುರಕ್ಕೆ ಹೋಗಿದೆ. ಇದರಿಂದ ಅನೇಕರಿಗೆ ಸಮಸ್ಯೆ ಆಗಿದೆ’ ಎಂದು ಅಲ್ಲಿನ ಸುರೇಶ ಪಟಗಾರ್ ಅವರು ವಿವರಿಸಿದರು.
`ಬಿಸಗೋಡಿನಲ್ಲಿ ಶೈಕ್ಷಣಿಕ ವಾತಾವರಣ ಉತ್ತಮವಾಗಿರುವುದರಿಂದ ಆನಗೋಡು ಸೇರಿ ಅನೇಕ ಭಾಗದ ಮಕ್ಕಳು ಅಲ್ಲಿಗೆ ಬರುತ್ತಾರೆ. ಆದರೆ, ಬಸ್ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಅವರೆಲ್ಲರೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ’ ಎಂದು ಅಲ್ಲಿನವರು ನೋವು ತೋಡಿಕೊಂಡರು. `ಯಲ್ಲಾಪುರದಿಂದ ಬಿಸಗೋಡಿಗೆ ಬಂದು ಕಟ್ಟಿಗೆಗೆ ಹೋಗುವ ಬಸ್ಸಿನಿಂದ ಯಾವುದೇ ಸಮಸ್ಯೆ ಇಲ್ಲ. ಯಲ್ಲಾಪುರದಿಂದ ಬಳಗಾರಿಗೆ ಬಂದು ಅಲ್ಲಿಂದ ಬಿಸಗೋಡು ಪ್ರವೇಶಿಸಿ ಮರಳಿ ಯಲ್ಲಾಪುರಕ್ಕೆ ಹೋಗುವ ಬಸ್ಸು ಬಿಸಗೋಡು ಪ್ರವೇಶಿಸದೇ ನೇರವಾಗಿ ಯಲ್ಲಾಪುರಕ್ಕೆ ಹೋಗುತ್ತಿರುವುದು ಸಮಸ್ಯೆ’ ಎಂದು ಪ್ರಯಾಣಿಕರು ವಿವರಿಸಿದರು.
