ಶಿರಸಿ ಯಲ್ಲಾಪುರ ರಸ್ತೆಯಲ್ಲಿ ದಿನಕ್ಕೊಂದು ಹೊಸ ಗುಂಡಿ ಪತ್ತೆಯಾಗುತ್ತಿದೆ. ಗುಂಡಿ ಕಂಡ ಸ್ಥಳದಲ್ಲೆಲ್ಲ ಸ್ಥಳೀಯರು ಬಾಳೆ ಗಿಡ ನೆಡುತ್ತಿದ್ದಾರೆ!
ಮಳೆ ಜೋರಾದಾಗ ಆ ಗುಂಡಿಯ ಆಳ-ಅಗಲ ಯಾರಿಗೂ ಗೊತ್ತಾಗುತ್ತಿಲ್ಲ. ಅನೇಕರು ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದು, ಸರ್ಕಾರ ಈವರೆಗೂ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ. ಹೀಗಾಗಿ ರಸ್ತೆಯಲ್ಲಿ ಗುಂಡಿಗಳಿರುವ ಬಗ್ಗೆ ವಾಹನ ಸವಾರರರಿಗೆ ಅರಿವು ಮೂಡಿಸುವುದಕ್ಕಾಗಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ.
ಕಳೆದ ಒಂದು ವಾರದಿಂದ ಶಿರಸಿ-ಯಲ್ಲಾಪುರ ರಸ್ತೆಯ ವಿವಿಧ ಕಡೆ ಈ ಬಗೆಯ ಪ್ರತಿಭಟನೆ ನಡೆದಿದೆ. ಯಲ್ಲಾಪುರದಿಂದ ಮಂಚಿಕೇರಿಯವರೆಗೂ ಗುಂಡಿಗಳ ಸಂಖ್ಯೆ ಹೆಚ್ಚಿದ್ದು, ರಸ್ತೆಯಲ್ಲಿ ರಾಡಿಯೂ ಭಾರೀ ಪ್ರಮಾಣದಲ್ಲಿ ತುಂಬಿದೆ. ಹೀಗಾಗಿ ಆ ಭಾಗದ ಜನರ ಜೊತೆ ವಾಹನಗಳಲ್ಲಿ ಓಡಾಟ ನಡೆಸುವ ಪ್ರಯಾಣಿಕರು ರಸ್ತೆ ಅವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ.
`ರಸ್ತೆಯಲ್ಲಿ ಗುಂಡಿ ಹೆಚ್ಚಾದ ಕಾರಣ ಬಾಡಿಗೆ ವಾಹನದವರು ಊರಿಗೆ ಬರುತ್ತಿಲ್ಲ. ಬರುವವರು ದುಪ್ಪಟ್ಟು ಹಣ ಕೇಳುತ್ತಾರೆ. ಅನಾರೋಗ್ಯಪೀಡಿತರಾದವರಿಗೆ ಇದರಿಂದ ಸಾಕಷ್ಟು ಸಮಸ್ಯೆ ಆಗಿದೆ’ ಎಂದು ಅಲ್ಲಿನವರು ನೋವು ತೋಡಿಕೊಂಡರು. `ಕಳೆದ ಅನೇಕ ವರ್ಷಗಳಿಂದ ರಸ್ತೆ ಸರಿಪಡಿಸಿ ಎಂದು ಒತ್ತಾಯಿಸಲಾಗುತ್ತಿದೆ. ಆದರೆ, ಯಾರೊಬ್ಬರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ಸವಣಗೇರಿಯ ನಾಗಭೂಷಣ ಭಟ್ಟ ದೂರಿದರು.
Discussion about this post