ಉತ್ತರ ಕನ್ನಡ ಜಿಲ್ಲೆಯ ಕರಾವಳಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಲಾರಿ ನಿಲ್ಲಿಸುವ ಚಾಲಕರು ಟ್ಯಾಂಕಿನಲ್ಲಿದ್ದ ಡಿಸೇಲ್ ಕದ್ದು ಮಾರುತ್ತಾರೆ ಎಂಬ ಆರೋಪವಿದೆ. ಅದಕ್ಕೆ ಪೂರಕವಾಗಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಡಿಸೇಲ್ ಕದ್ದ ಟ್ಯಾಂಕರ್ ಚಾಲಕನ ವಿರುದ್ಧ ತನಿಖೆ ಶುರುವಾಗಿದೆ.
ವಿಜಯಪುರದ ನಾಡಗೌಡ ರೋಡಲೈನ್ಸ್ ಕಂಪನಿಗೆ ಸೇರಿದ ಡಿಸೇಲ್ ಗೋಕರ್ಣದ ಯ ಬೆಟ್ಟುಳ್ಳಿ ಬಳಿ ಕಳ್ಳತನವಾಗಿದೆ. ಟ್ಯಾಂಕರ್ ಚಾಲಕ ಸಾಬಣ್ಣ ಕನ್ನೊಳ್ಳಿ ಡೀಸೆಲ್ ಕದ್ದು ಮಾರಾಟ ಮಾಡಿದ್ದು, ಪೊಲೀಸರು ಸರಿಯಾಗಿ ತನಿಖೆ ನಡೆಸಿದಲ್ಲಿ ಕಾಳಸಂತೆಯಲ್ಲಿ ಡೀಸೆಲ್ ಖರೀದಿಸಿದ ಸ್ಥಳೀಯ ವ್ಯಕ್ತಿಯೂ ಇಲ್ಲಿ ಸಿಕ್ಕಿ ಬೀಳುವ ಸಾಧ್ಯತೆಯಿದೆ.
ನಾಡಗೌಡ ರೋಡಲೈನ್ಸ್ ಟ್ಯಾಂಕರಿನಲ್ಲಿ ಅಗಸ್ಟ 16ರಂದು ಬೆಳಗಾವಿಯಿಂದ ಎಥನಾಲ್ ತುಂಬಿಕೊAಡು ಬಂದ ಸಾಬಣ್ಣ ಕನ್ನೊಳ್ಳಿ ಅದನ್ನು ಮಂಗಳೂರಿನಲ್ಲಿ ಖಾಲಿ ಮಾಡಿದರು. ಅದಾದ ನಂತರ ಅದೇ ದಿನ ವಿಜಯಪುರಕ್ಕೆ ಮರಳುವಾಗ ಮಂಗಳೂರಿನ ಕಲ್ಯಾಣಿ ಪೆಟ್ರೊಲ್ ಬಂಕಿನಲ್ಲಿ 120 ಲೀಟರ್ ಡಿಸೇಲ್’ನ್ನು ಟ್ಯಾಂಕರಿಗೆ ತುಂಬಿಸಿದರು. ಅಗಸ್ಟ 23ರಂದು ಸಂಜೆ ಆ ಟ್ಯಾಂಕರ್ ಗೋಕರ್ಣ ಬಳಿಯ ಬೆಟ್ಟುಳ್ಳಿ ಹೆದ್ದಾರಿ ಅಂಚಿನಲ್ಲಿ ನಿಂತಿದ್ದು, ಆ ವೇಳೆಯಲ್ಲಿಯೇ 120ಲೀಟರ್ ಡಿಸೇಲ್ ಕದ್ದು ಮಾರಾಟ ಮಾಡಿದರು.
ಅದಾದ ನಂತರ ಈ ವಿಷಯ ಕಂಪನಿಗೆ ಗೊತ್ತಾಗಿದ್ದು, ಅದನ್ನು ಅರಿತ ಚಾಲಕ ಸಾಬಣ್ಣ ಕನ್ನೊಳ್ಳಿ ಪರಾರಿಯಾದರು. 10825ರೂ ಮೌಲ್ಯದ ಡಿಸೇಲ್ ಕದ್ದವನಿಗಾಗಿ ಕಂಪನಿಯವರು ಹುಡುಕಾಟ ನಡೆಸಿದರು. ಟ್ಯಾಂಕರ್ ಬೆಟ್ಟುಳ್ಳಿ ಬಳಿ ನಿಂತಿರುವುದನ್ನು ಪತ್ತೆ ಮಾಡಿ, ಗೋಕರ್ಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಾಡಗೌಡ ರೋಡ್‌ಲೈನ್ಸಿನ ಮ್ಯಾನೇಜರ್ ರಾಕೇಶಕುಮಾರ ಈ ಬಗ್ಗೆ ಪೊಲೀಸ್ ಪ್ರಕರಣವನ್ನು ದಾಖಲಿಸಿದರು.
Discussion about this post