ಕುಮಟಾ ಹೆಗಡೆ ಕುಮಟಾ ಮಾರ್ಗವಾಗಿ ಸಂಚರಿಸುವ ಬಸ್ಸಿನ ಸ್ಟೇರಿಂಗ್ ತುಂಡಾಗಿದೆ. ಚಲಿಸುವಾಗಲೇ ಸ್ಟೇರಿಂಗ್ ತುಂಡಾಗಿದ್ದರಿoದ ಆ ಬಸ್ಸು ರಸ್ತೆ ಅಂಚಿನ ಚಹಾ ಅಂಗಡಿಗೆ ಗುದ್ದಿದೆ.
ಗುರುವಾರ ಬೆಳಗ್ಗೆ ಈ ಬಸ್ಸು ಹೆಗಡೆಯಿಂದ ಕುಮಟಾಗೆ ಬರುತ್ತಿತ್ತು. ಇಂಡಸ್ಟಿçಯಲ್ ಕ್ರಾಸ್ ಬಳಿ ಬಸ್ಸು ಏಕಾಏಕಿ ಬಲಕ್ಕೆ ತಿರುಗಿತು. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಕಂಗಾಲಾದರು. ಎಲ್ಲರೂ ಸೇರಿ `ಏನಾಯ್ತು?’ ಎಂದು ಪ್ರಶ್ನಿಸುವುದರ ಒಳಗೆ ಬಸ್ಸಿನ ಸ್ಟೇರಿಂಗ್ ಕಬ್ಬಿಣ ಚಾಲಕನ ಕೈಯಲ್ಲಿರುವುದನ್ನು ಗಮನಿಸಿದರು.
ಆ ಬಸ್ಸು ವೇಗವಾಗಿದ್ದರಿಂದ ನಿಯಂತ್ರಣ ಸಾಧ್ಯವಾಗಲಿಲ್ಲ. ಬಸ್ಸು ನೇರವಾಗಿ ಅಲ್ಲಿದ್ದ ಚಹಾ ಅಂಗಡಿಗೆ ಗುದ್ದಿ ನಿಂತಿತು. ಗಣೇಶ ಹಬ್ಬದ ಹಿನ್ನಲೆ ಚಹಾ ಅಂಗಡಿಗೆ ರಜೆ ನೀಡಿದ್ದರಿಂದ ಯಾರಿಗೂ ಪೆಟ್ಟಾಗಲಿಲ್ಲ. ಬಸ್ಸಿನಲ್ಲಿದ್ದವರು ಸಹ ಮುನ್ನಚ್ಚರಿಕೆವಹಿಸಿದ್ದರಿಂದ ಗಾಯ-ನೋವಿನಿಂದ ಬಚಾವಾದರು.
ಬಸ್ ಅಪಘಾತದ ಸುದ್ದಿ ಕೇಳಿ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ದೌಡಾಯಿಸಿದರು. ನಿಗಮದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದರು. ಚಹಾ ಅಂಗಡಿ ಮಾಲಕನಿಗೆ ಆದ ನಷ್ಟ ಗಮನಿಸಿದ ಅವರು ತಕ್ಷಣ ಪರಿಹಾರ ಕೊಡುವಂತೆ ತಾಕೀತು ಮಾಡಿದರು. ಚಹಾ ಅಂಗಡಿ ಮಾಲಕ ನಾಗೇಶ ಗೌಡ ಅವರಿಗೆ 20 ಸಾವಿರ ರೂ ಪರಿಹಾರ ನೀಡಲು ಅಧಿಕಾರಿಗಳು ಒಪ್ಪಿದರು.
ನಿತ್ಯವೂ ಈ ಅವಧಿಯಲ್ಲಿ ಚಹಾ ಅಂಗಡಿಯಲ್ಲಿ ಜನ ಇರುತ್ತಿದ್ದರು. ಅಂಗಡಿ ಬಾಗಿಲು ಮುಚ್ಚಿದ್ದರಿಂದ ಅಪಘಾತ ಸ್ಥಳದಲ್ಲಿ ಜನ ಓಡಾಟ ಇರಲಿಲ್ಲ. ಹೀಗಾಗಿ ಅಪಘಾತ ನಡೆದರೂ ಜನ ಪ್ರಾಣ ಉಳಿಸಿಕೊಂಡರು.
