ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ ಅಂಚಿನ ಗೂಡಂಗಡಿಗಳಲ್ಲಿ ರಾಜಾರೋಷವಾಗಿ ಸರಾಯಿ ಮಾರಾಟ ನಡೆಯುತ್ತಿದೆ. ಲಾರಿ ಚಾಲಕರನ್ನು ಮುಖ್ಯ ಗುರಿಯಾಗಿರಿಸಿಕೊಂಡು ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.
ಹೆದ್ದಾರಿಯಲ್ಲಿ ನಡೆಯುವ ಬಹುತೇಕ ಅಪಘಾತಗಳಿಗೆ ಈ ಮದ್ಯದ ನಶೆಯೂ ಕಾರಣವಾಗಿದೆ. ರಾತ್ರಿಯಿಡೀ ಬಾಗಿಲು ತೆರೆದಿಡುವ ಕೆಲ ಗೂಡಂಗಡಿಕಾರರು ಹೆದ್ದಾರಿಯಲ್ಲಿ ಸಾಗುವ ವಾಹನ ಚಾಲಕರಿಂದ ದುಪ್ಪಟ್ಟು ಹಣಪಡೆದು ಸರಾಯಿ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದು, ಅಕ್ರಮ ತಡೆಗೆ ಪೊಲೀಸರು ದಾಳಿ ಮುಂದುವರೆಸಿದ್ದಾರೆ.
ಹೆದ್ದಾರಿ ಅಂಚಿನ ಅಂಗಡಿಗಳ ಮೇಲೆ ಪೊಲೀಸರು ದಾಳಿ ಮಾಡಿದಾಗಲೆಲ್ಲ ಅಲ್ಲಿ ಅಕ್ರಮ ಮದ್ಯ ಮಾರಾಟದ ಕುರುಹುಗಳು ಸಿಗುತ್ತಿವೆ. ಸಾಕಷ್ಟು ಪ್ರಮಾಣದಲ್ಲಿ ಮದ್ಯ ಹಾಗೂ ಮಾರಾಟದಿಂದ ಸಿಕ್ಕ ಹಣವನ್ನು ಪೊಲೀಸರು ವಶಕ್ಕೆಪಡೆಯುತ್ತಿದ್ದಾರೆ. ಮದ್ಯ ಮಾರಾಟಗಾರರ ವಿರುದ್ಧ ಕಾನೂನು ಕ್ರಮವಾದರೂ ಆ ಅಕ್ರಮಕ್ಕೆ ಕಡಿವಾಣ ಬಿದ್ದಿಲ್ಲ.
ಹೊನ್ನಾವರದಲ್ಲಿ ಹಾದು ಹೋದ ಹೆದ್ದಾರಿ ಅಂಚಿನಲ್ಲಿ ಹೆಂಡ ಮಾರುತ್ತಿದ್ದ ದಿಬ್ಬಣಗಲ್ ಬರ್ನಕೇರಿಯ ಆದಿತ್ಯ ಗೌಡ ಹಾಗೂ ಮೂಡ್ಕಣಿ ಕೆರವಳ್ಳಿಯ ನಾರಾಯಣ ಗೌಡ ಅವರ ಮೇಲೆ ಹೊನ್ನಾವರ ಪಿಎಸ್ಐ ರಾಜಕುಮಾರ ಉಕ್ಕಲಿ ಅವರು ದಾಳಿ ಮಾಡಿದ್ದಾರೆ. ಕಾನಗೋಡು ಕ್ರಾಸಿನ ಬಳಿ ಅವರಿಬ್ಬರು ಹೆಂಡ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದು, ಪೊಲೀಸರಿಗೆ 49ಸಾವಿರ ರೂ ಮೌಲ್ಯದ ಅಕ್ರಮ ಸರಾಯಿ ಸಿಕ್ಕಿದೆ.
40ರೂಪಾಯಿಯ 1242 ಟೆಟ್ರಾಪ್ಯಾಕುಗಳ ಜೊತೆ ಕಿಕ್ಫೈನ್ ವಿಸ್ಕಿ ಪ್ಯಾಕೇಟುಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಪೊಲೀಸರನ್ನು ಕಂಡ ಅವರಿಬ್ಬರು ಸರಾಯಿಯನ್ನು ಅಲ್ಲಿಯೇ ಬಿಟ್ಟು ಅವರಿಬ್ಬರು ಪರಾರಿಯಾಗಿದ್ದಾರೆ. ಅವರಿಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.
