ಸರ್ಕಾರಿ ದಾಖಲೆಗಳ ಪ್ರಕಾರ ಮುಂಡಗೋಡಿನ ರಾಜೇಶ ಹುಲಿಯಪ್ಪನವರ್ ಅವರು ತಮ್ಮ ಎರಡುವರೆ ಎಕರೆ ಭೂಮಿಯನ್ನು ಜಮೀರ ದರ್ಗಾವಾಲೆ ಅವರಿಗೆ ಮಾರಾಟ ಮಾಡಿದ್ದಾರೆ. ಆದರೆ, `ತಮ್ಮನ್ನು ಅಪಹರಣ ಮಾಡಿ ಚಾಕು-ಪಿಸ್ತೂಲು ತೋರಿಸಿ ಹೆದರಿಸಿ ಈ ಭೂಮಿಪಡೆದಿದ್ದಾರೆ’ ಎಂದು ಇದೀಗ ರಾಜೇಶ ಹುಲಿಯಪ್ಪನವರ್ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಮುಂಡಗೋಡಿನ ಹಳೂರು ಓಣಿಯಲ್ಲಿ ರಾಜೇಶ ಹುಲಿಯಪ್ಪನವರ್ ವಾಸವಾಗಿದ್ದರು. ಮುಂಡಗೋಡದ 73/1ರಲ್ಲಿ ಅವರು ಜಮೀನುಹೊಂದಿದ್ದರು. 2024ರ ಫೆಬ್ರವರಿಯಲ್ಲಿ ಬಸವರಾಜ ಪಾಟೀಲ ಅವರ ಸಾಲದ ಸಲುವಾಗಿ ಜಮೀನು ಭದ್ರತೆಗೆ ಕೊಟ್ಟು ಮಂಜುನಾಥ ಸವಣೂರು ಅವರಿಂದ 9 ಲಕ್ಷ ರೂ ಸಾಲಪಡೆದಿದ್ದರು. ಅದಾದ ನಂತರ ಬಸವರಾಜ ಪಾಟೀಲ ಅವರು ಮತ್ತೆ ಅದೇ ಜಮೀನನ್ನು ಭದ್ರತೆಯಾಗಿರಿಸಿ ಜಗದೀಶ ಕುರಬರ ಅವರಿಂದ 20 ಲಕ್ಷ ರೂ ಸಾಲಪಡೆದಿದ್ದರು. ಈ ವೇಳೆ ಹಳೆಯ 9 ಲಕ್ಷ ರೂ ಸಾಲವನ್ನು ಅವರು ಮರುಪಾವತಿ ಮಾಡಿದ್ದರು.
ಹೀಗಿರುವಾಗ ಈ ವಿಷಯ ಜಮೀರ್ ದುರ್ಗಾವಾಲೆ ಅವರ ಬಳಿ ಕೆಲಸ ಮಾಡುತ್ತಿದ್ದ ರಾಜೇಶ ಹುಲಿಯಪ್ಪನವರ ಅವರ ತಮ್ಮನಿಗೆ ಗೊತ್ತಾಯಿತು. `ಭೂ ಪರಿವರ್ತನೆ ಮಾಡಿ ಜಮೀನನ್ನು ಮಾರಾಟ ಮಾಡೋಣ. ಶೇ 60/40ರ ಒಪ್ಪಂದಲ್ಲಿ ಲಾಭ ಹಂಚಿಕೊಳ್ಳೋಣ’ ಎಂದು ರಾಜೇಶ ಹುಲಿಯಪ್ಪನವರ ಅವರಿಗೆ ಅವರ ತಮ್ಮ ಮನವರಿಕೆ ಮಾಡಿದರು. ಇದಕ್ಕಾಗಿ ಆ ಜಮೀನು ಭದ್ರತೆಯಾಗಿರಿಸಿಕೊಂಡಿದ್ದ ಜಗದೀಶ ಕುರಬರ ಅವರಿಗೆ ರಾಜೇಶ ಹುಲಿಯಪ್ಪನವರ ಅವರ ತಮ್ಮನೇ 21.50 ಲಕ್ಷ ರೂ ಹಣ ನೀಡಿ, ಜಮೀನು ಬಿಡಿಸಿಕೊಂಡರು. `ಜಮೀನು ಬಿಡಿಸಿಕೊಂಡಿದಕ್ಕೆ ಆಧಾರ ಬೇಕು’ ಎಂದು ನಂಬಿಸಿ ರಾಜೇಶ ಹುಲಿಯಪ್ಪನವರ ಅವರಿಂದ ವಿವಿಧ ಕಾಗದಪತ್ರಗಳ ಮೇಲೆ ಸಹಿ ಮಾಡಿಸಿದರು. ಜೊತೆಗೆ ಜಮೀನು ಮಾರಾಟದ ಸಂಚಕಾರ ಪತ್ರವನ್ನು ಸಿದ್ಧಪಡಿಸಿದರು.
ರಾಜೇಶ ಹುಲಿಯಪ್ಪನವರ್ ಅವರು ದೂರಿದ ಪ್ರಕಾರ, 2025ರ ಅಗಸ್ಟ 8ರಂದು ಜಮೀರ ಅಹ್ಮದ್ ಅವರ ಕಡೆಯ ಇಬ್ಬರು ಹುಡುಗರು ರಾಜೇಶ ಹುಲಿಯಪ್ಪನವರ್ ಅವರ ಮನೆಗೆ ಬಂದರು. ರಾಜೇಶ ಹುಲಿಯಪ್ಪನವರ್ ಹಾಗೂ ಅವರ ತಮ್ಮನ ಜಮೀರ್ ಅಹ್ಮದ್ ಅವರು ತಮ್ಮ ಕಚೇರಿಗೆ ಕರೆಯಿಸಿದರು. ಅಲ್ಲಿ ಈ ಹಿಂದೆ ನಡೆದಿದ್ದ ಜಮೀನು ವ್ಯವಹಾರದ ಕಾಗದಪತ್ರವನ್ನು ರದ್ದು ಮಾಡಿಸಿದರು. ಅಗಸ್ಟ 13ರಂದು ಅನೇಕ ಹುಡುಗರ ಮೂಲಕ ಮತ್ತೆ ಜಮೀರ್ ಅಹ್ಮದ್ ಅವರು ರಾಜೇಶ ಹುಲಿಯಪ್ಪನವರ್ ಹಾಗೂ ಅವರ ತಮ್ಮನನ್ನು ಕಚೇರಿಗೆ ಕರೆಯಿಸಿಕೊಂಡು ಬೈಗುಳ ಶುರು ಮಾಡಿದರು. `ತಾನು ಹೇಳಿದ ಜಾಗದಲ್ಲಿ ಸಹಿ ಮಾಡಬೇಕು’ ಎಂದು ಬೆದರಿಕೆ ಹಾಕಿದರು. ಅವರಿಬ್ಬರಿಗೂ ಚಾಕು ತೊರಿಸಿ ಉಪನೊಂದಣಿ ಕಚೇರಿಗೆ ಕರೆದುಕೊಂಡು ಹೋದರು.
ಅಲ್ಲಿದ್ದ ತೋಪಿನ್ ಎಂಬಾತರ ಮೂಲಕ ಬಲವಂತವಾಗಿ ಕ್ರಯ ಪತ್ರಕ್ಕೆ ಸಹಿ ಹಾಕಿಸಿದರು. ಆ ದಿನ ರಾತ್ರಿ 11 ಗಂಟೆಯವರೆಗೆ ಜಮೀರ್ ಅಹ್ಮದ್ ಅವರು ರಾಜೇಶ ಹುಲಿಯಪ್ಪನವರ್ ಅವರನ್ನು ಕಚೇರಿಯಲ್ಲಿ ಕೂರಿಸಿ ನಂತರ ಬಿಡುಗಡೆ ಮಾಡಿದರು. ಮರುದಿನ ಬೆಳಗ್ಗೆ 5 ಗಂಟೆಗೆ ಮತ್ತೆ ಜಮೀರ್ ಅಹ್ಮದ್ ಅವರ ಕಡೆಯ ಹುಡುಗರು ರಾಜೇಶ ಹುಲಿಯಪ್ಪನವರ್ ಅವರ ಮನೆಗೆ ಬಂದಿದ್ದು, ಅಣ್ಣ-ತಮ್ಮ ಇಬ್ಬರನ್ನು ಅಪಹರಿಸಿದರು. ತಡಸ ಕ್ರಾಸಿನ ಬಳಿ ಚಾಕು, ಗನ್ ತೋರಿಸಿ ಬೆದರಿಕೆ ಒಡ್ಡಿದರು. ಅದಾದ ನಂತರ ಹುಬ್ಬಳ್ಳಿ, ಗೋವಾ, ಬಾಂಬೆ, ದೆಹಲಿ ಸೇರಿ ಹಲವು ಕಡೆ ಸುತ್ತಾಡಿಸಿದರು. ನಂತರ ಗೋವಾಗೆ ಬಂದು ಅಲ್ಲಿಂದ ದಾಂಡೇಲಿ ಮೂಲಕ ಅಗಸ್ಟ 25ರಂದು ಮುಂಡಗೋಡಿಗೆ ತಂದು ಬಿಟ್ಟರು.
ಅಷ್ಟರಲ್ಲಿ ಆ ಜಮೀನು ಜಮೀರ್ ಅಹ್ಮದ್ ಹೆಸರಿಗೆ ನೊಂದಣಿ ಆಗಿತ್ತು. ಈ ಬಗ್ಗೆ ಅರಿತ ರಾಜೇಶ ಹುಲಿಯಪ್ಪನವರ್ ಅವರು ಜಮೀರ ಅಹ್ಮದ್ ದರ್ಗಾವಾಲೆ ಜೊತೆ ತೋಫಿನ್, ಸಾಧಿಕ್ ಚಾವುಸ್, ಸಾನು ಶನವಾಜ್, ಜಾಫರ್ ಕಾರ್ಪರೆಂಟರ್ ಹಾಗೂ ಯೂಸಿಪ್ ಗಡವಾಲೆ ವಿರುದ್ಧ ಶಿರಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಹೆದರಿಸಿ ಜಮೀನುಪಡೆದಿದ್ದರ ಜೊತೆ ತಮ್ಮನ್ನು ಅಪಹರಿಸಿ ಊರುರು ಅಲೆದಾಡಿಸಿದ ಬಗ್ಗೆಯೂ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
