ಅಂಕೋಲಾದ ಸಂದೀಪ ನಾಯ್ಕ ಅವರು ಜೆಸಿಬಿ ಯಂತ್ರದಿoದ ತಮ್ಮ ಭೂಮಿ ಕೆಲಸ ಮಾಡಿಸಿಕೊಂಡಿದ್ದು, ಬಾಡಿಗೆ ಕೇಳಿದ ಕಾರಣ ಜೆಸಿಬಿ ಮಾಲಕ ಲಕ್ಷ್ಮಣ ಗೌಡ ಅವರಿಗೆ ಥಳಿಸಿದ್ದಾರೆ.
ಅಂಕೋಲಾ ಸುಂಕಸಾಳದ ಲಕ್ಷ್ಮಣ ಗೌಡ ಅವರು ಜೆಸಿಬಿ ಮಾಲಕರು. ತಮ್ಮ ಯಂತ್ರವನ್ನು ಬಾಡಿಗೆಗೆ ಬಿಟ್ಟು ಅವರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಿರುವಾಗ ಅದೇ ಊರಿನ ಸಂದೀಪ ನಾಯ್ಕ ಅವರು ಲಕ್ಷ್ಮಣ ಗೌಡ ಅವರ ಬಳಿ ಜೆಸಿಬಿ ಯಂತ್ರ ಬಾಡಿಗೆಗೆ ಬೇಕಿರುವ ಬಗ್ಗೆ ತಿಳಿಸಿದ್ದರು.
ಜುಲೈ 2ರಂದು ಮಾತುಕಥೆ ನಡೆದ ಪ್ರಕಾರ ಲಕ್ಷ್ಮಣ ಗೌಡ ಅವರು ಜೆಸಿಬಿ ಯಂತ್ರವನ್ನು ಕಳುಹಿಸಿದ್ದರು. ಸಂದೀಪ ನಾಯ್ಕ ಅವರ ಕೆಲಸವನ್ನು ಮಾಡಿಕೊಟ್ಟಿದ್ದರು. ಕೆಲಸ ಮುಗಿದ ನಂತರ ಜೆಸಿಬಿ ಬಾಡಿಗೆ ಬಂದಿರಲಿಲ್ಲ. ಹೀಗಾಗಿ ಬಾಡಿಗೆ ಹಣ ಕೇಳಲು ಲಕ್ಷ್ಮಣ ಗೌಡ ಅವರು ಸಂದೀಪ ನಾಯ್ಕ ಅವರ ಮನೆಗೆ ಹೋಗಿದ್ದರು. ಈ ವೇಳೆ `ಇಲ್ಲಿ ಮಾತನಾಡುವುದು ಬೇಡ. ಹೊಟೇಲ್ ಹೈಲೆಂಡ್ ಬಳಿ ಹೋಗೋಣ’ ಎಂದು ಸಂದೀಪ ನಾಯ್ಕ ಹೇಳಿದರು.
ಅದರ ಪ್ರಕಾರ ಸಂದೀಪ ನಾಯ್ಕ ಅವರ ಕಾರಿನ ಮೇಲೆಯೇ ಲಕ್ಷ್ಮಣ ಗೌಡ ಅವರು ಸುಂಕಸಾಳದ ಹೈಲೆಂಡ್ ಹೊಟೇಲ್ ಬಳಿ ಹೋದರು. ಅಲ್ಲಿ ಕಾಸು ಕೇಳಿದಾಗ ಸಂದೀಪ ನಾಯ್ಕ ಅವರು ತಮ್ಮ ವರಸೆ ಬದಲಿಸಿದರು. `ಹಣ ಕೊಡುವುದಿಲ್ಲ. ನಿನ್ನಿಂದ ಏನೂ ಮಾಡಿಕೊಳ್ಳಲು ಆಗುವುದಿಲ್ಲ’ ಎಂದು ಲಕ್ಷö್ಮಣ ಗೌಡ ಅವರನ್ನು ಕಾಲಿನಿಂದ ಎದೆಗೆ ಒದ್ದರು. ಅದಾದ ನಂತರ ಮುಖಕ್ಕೆ ಸಹ ಒದ್ದರು. ಕೈಯಲಿದ್ದ ಮೊಬೈಲಿನಿಂದ ಮೂಗಿಗೆ ಹೊಡೆದು ನೋವು ಮಾಡಿದರು.
ಈ ವಿದ್ಯಮಾನದಿಂದ ಆಘಾತಕ್ಕೆ ಒಳಗಾದ ಲಕ್ಷ್ಮಣ ಗೌಡ ಅವರು ಅಂಕೋಲಾ ಆಸ್ಪತ್ರೆಗೆ ದಾಖಲಾದರು. ಅದಾದ ನಂತರ ತಮಗಾದ ಅನ್ಯಾಯದ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ದೂರು ನೀಡಿದರು. ನ್ಯಾಯಾಲಯದ ಸೂಚನೆ ಪ್ರಕಾರ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
