ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪರಿಣಾಮ ಕರಾವಳಿ ತೀರದ ಅನೇಕ ಊರುಗಳು ನದಿಯಂತೆ ಭಾಸವಾಗುತ್ತಿದೆ.
ಕಾರವಾರದಿಂದ ಭಟ್ಕಳದವರೆಗೂ ಅನೇಕ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ. ಮಲೆನಾಡು ಪ್ರದೇಶದಲ್ಲಿ ಮಳೆ ನಿರಂತರವಾಗಿದ್ದರೂ ಕರಾವಳಿಯ ಬಗೆಯಲ್ಲಿ ಹಾನಿ ಮಾಡಿಲ್ಲ. ಕರಾವಳಿ ಪ್ರದೇಶದಲ್ಲಿ ಮನೆ-ಅಂಗಡಿಗಳಿಗೆ ಸಹ ನೀರು ನುಗ್ಗಿದೆ. ರಸ್ತೆಯ ಮೇಲೆ ನೀರು ಬಂದಿದ್ದರಿoದ ವಾಹನ ಸವಾರರು ಸಮಸ್ಯೆ ಅನುಭವಿಸಿದ್ದಾರೆ.
ಶುಕ್ರವಾರ ರಭಸ ಮಳೆ ಸುರಿಯುವುದನ್ನು ಅಂದಾಜಿಸಿ ಕರಾವಳಿ ಭಾಗದ ಅಂಗನವಾಡಿ ಹಾಗೂ ಶಾಲೆಗಳಿಗೆ ದಿಢೀರ್ ಆಗಿ ರಜೆ ಘೋಷಿಸಲಾಗಿದೆ. ತಹಶೀಲ್ದಾರ್ ಹಂತದಲ್ಲಿ ರಜೆ ಘೋಷಣೆಯಾಗಿದ್ದು, ಅನೇಕ ಮಕ್ಕಳು ಗಾಳಿ-ಮಳೆಯಿಂದ ರಕ್ಷಿಸಿಕೊಂಡಿದ್ದಾರೆ. ಕುಮಟಾ ತಾಲೂಕಿನ ಗೋಕರ್ಣ, ಮಾದನಗೇರಿ ಭಾಗದ ವಾಣಿಜ್ಯ ಮಳಿಗೆಗಳ ಒಳಗೆ ನೀರು ತುಂಬಿದೆ. ಲಿಂಗನಮಕ್ಕಿ ಹಾಗೂ ಗೇರುಸೊಪ್ಪ ಅಣೆಕಟ್ಟಿನಿಂದ ನೀರುಬಿಟ್ಟ ಪರಿಣಾಮ ಹೊನ್ನಾವರದ ಅನೇಕ ತೋಡಗಳಿಗೆ ನೀರು ನುಗ್ಗಿದೆ. ಕಾರವಾರದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಕೋಡಿಭಾಗದ ವಿಜಯಾ ಪಾಲೇಕರ್ ಅವರ ಮನೆಯ ಗೋಡೆ ಕುಸಿದಿದೆ. ಹೊನ್ನಾವರದ ಕರ್ನಲ್ ಕಂಬದ ಹೆದ್ದಾರಿಯ ಗುಡ್ಡ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಹೊoಡದ ಹೆದ್ದಾರಿ:
ಜಿಲ್ಲೆಯ ಅನೇಕ ರಸ್ತೆಗಳು ಹೊಂಡದಿoದ ಕೂಡಿದೆ. ಮಳೆ ಸುರಿದ ಪರಿಣಾಮ ಆ ಹೊಂಡಗಳಲ್ಲಿ ನೀರು ತುಂಬಿದ್ದು, ರಸ್ತೆಯೂ ಕಾಣತ್ತಿಲ್ಲ. ಹೊಂಡದ ಆಳ-ಅಗಲವೂ ಗೊತ್ತಾಗುತ್ತಿಲ್ಲ. ಈ ನಡುವೆ ವಾಹನಗಳೇ ಮುಳುಗುವಷ್ಟರ ಮಟ್ಟಿಗೆ ರಸ್ತೆಗಳಲ್ಲಿ ನೀರು ತುಂಬಿದೆ. ರಸ್ತೆ ಅಂಚಿನ ಚರಂಡಿಯನ್ನು ಸ್ವಚ್ಚಗೊಳಿಸದಿರುವುದು ಈ ಅವಾಂತರಕ್ಕೆ ಕಾರಣ ಎಂಬ ಆರೋಪವಿದೆ.
