ಮೊದಲು 400ರೂ, ನಂತರ 800ರೂ, ಅದಾದ ಮೇಲೆ 4 ಸಾವಿರ, 16 ಸಾವಿರ.. ಹೀಗೆ ಸೈಬರ್ ಕ್ರೈಂ ಕ್ರಿಮಿಗಳು ಹಳಿಯಾಳದ ಗೋಪಾಲ ಭಾಗ್ವತಕರ್ ಬ್ಯಾಂಕಿನಲ್ಲಿದ್ದ ಹಣ ಎಗರಿಸಿದ್ದಾರೆ. ಒಟ್ಟು 1.46 ಲಕ್ಷ ರೂ ಹಣ ಕಡಿತವಾದರೂ ಅವರ ಮೊಬೈಲಿಗೆ ಬ್ಯಾಂಕಿನಿoದ ಒಂದೇ ಒಂದು ಮೆಸೆಜ್ ಬಂದಿಲ್ಲ!
ಹಳಿಯಾಳದ ಶೇಖನಕಟ್ಟಾದ ಗೋಪಾಲ ಭಾಗ್ವತಕರ್ ಅವರು ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದಾರೆ. ಅವರು ಎಸ್ಬಿಐ ಬ್ಯಾಂಕಿನಲ್ಲಿ ಖಾತೆಹೊಂದಿದ್ದು, ತಮ್ಮ ಉಳಿತಾಯದ ಹಣವನ್ನು ಅಲ್ಲಿರಿಸಿದ್ದರು. ಜುಲೈ 31ರಂದು ಅವರ ಬ್ಯಾಂಕ್ ಖಾತೆಯಲ್ಲಿ 1.64 ಲಕ್ಷ ರೂ ಹಣವಿತ್ತು. ಅಗಸ್ಟ 14ರಂದು ನೋಡಿದಾಗ ಅದರಲ್ಲಿದ್ದ 1.46 ಲಕ್ಷ ರೂ ಕಾಣೆಯಾಗಿತ್ತು.
ಗೋಪಾಲ ಭಾಗ್ವತಕರ್ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದರು. ಅದರ ಪ್ರಕಾರ, ಅಗಸ್ಟ 1ರಂದು ಮೊದಲ ಬಾರಿ ಅವರ ಬ್ಯಾಂಕ್ ಖಾತೆಯಿಂದ 400ರೂ ಕಾಣೆಯಾದಾಗಲೇ ಅವರಿಗೆ ಮೆಸೆಜ್ ಬರಬೇಕಿತ್ತು. ಆದರೆ, ಆ ದಿನ ಯಾವುದೇ ಮೆಸೆಜ್ ಬರಲಿಲ್ಲ. ಅಗಸ್ಟ 4ರಂದು 800ರೂಪಾಯಿಗಳಂತೆ ಮೂರು ಬಾರಿ ಹಣ ಕಡಿತವಾದಾಗಲಾದರೂ ಮೆಸೆಜ್ ಬರಬೇಕಿತ್ತು. ಆದರೆ, ಆಗಲೂ ಬರಲಿಲ್ಲ. ಅದೇ ದಿನ 4 ಸಾವಿರ ರೂಪಾಯಿಗಳಂತೆ 4 ಬಾರಿ ದುಷ್ಕರ್ಮಿಗಳು ಬ್ಯಾಂಕ್ ಖಾತೆಯ ಹಣ ಎಗರಿಸಿದರು. ಆಗ ಸಹ ಬ್ಯಾಂಕಿನಿoದ ಹಣ ಕಡಿತವಾದ ಬಗ್ಗೆ ಮೆಸೆಜ್ ಬರಲಿಲ್ಲ.
ಅದಾದ ನಂತರ ಅಗಸ್ಟ 5ರಂದು 16 ಸಾವಿರ ರೂಪಾಯಿಗಳಂತೆ ಎರಡು ಬಾರಿ ಗೋಪಾಲ ಭಾಗ್ವತಕರ್ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಾಣೆಯಾಯಿತು. ಅದಾದ ನಂತರ ಒಮ್ಮೆ 8 ಸಾವಿರ ರೂ, ಅಗಸ್ಟ 6ರಂದು 24 ಸಾವಿರ, 28 ಸಾವಿರ ರೂ ಹಣ ಕಳ್ಳರ ಪಾಲಾಯಿತು. ಅಗಸ್ಟ 10ರಂದು ಬ್ಯಾಂಕ್ ಖಾತೆಯಲ್ಲಿ ಉಳಿದಿದ್ದ ಹಣದ ಪೈಕಿ ಮತ್ತೆ 32 ಸಾವಿರ ಕಣ್ಮರೆಯಾಯಿತು. ಆದರೂ, ಬ್ಯಾಂಕಿನಿAದ ಹಣ ಕಡಿತವಾದ ಬಗ್ಗೆ ಒಂದೇ ಒಂದು ಮೆಸೆಜ್ ಸಹ ಗ್ರಾಹಕರು ಸ್ವೀಕರಿಸಲಿಲ್ಲ.
ಅಗಸ್ಟ 14ರಂದು ಗೋಪಾಲ ಭಾಗ್ವತಕರ್ ಅವರು ಫೋನ್ ಫೇ ಮೂಲಕ ತಮ್ಮ ಸ್ನೇಹಿತರಿಗೆ ಹಣ ವರ್ಗಾಯಿಸಲು ಪ್ರಯತ್ನಿಸಿದರು. ಆಗ, ಹಣ ವರ್ಗಾವಣೆ ಆಗಲಿಲ್ಲ. ಈ ಬಗ್ಗೆ ಹಳಿಯಾಳದ ಎಸ್ಬಿಐ ಬ್ಯಾಂಕಿಗೆ ಹೋಗಿ ಪ್ರಶ್ನಿಸಿದರು. ಆಗ, ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಳ್ಳರ ಖಾತೆಗೆ ವರ್ಗವಾಗಿರುವುದು ಗಮನಕ್ಕೆ ಬಂದಿತು. `ಮೊದಲ ಬಾರಿ ಹಣ ಕಡಿತವಾದಾಗಲೇ ಏಕೆ ಮೆಸೆಜ್ ಬಂದಿಲ್ಲ?’ ಎಂದವರು ಪ್ರಶ್ನಿಸಿದರೂ ಬ್ಯಾಂಕಿನವರ ಬಳಿ ಉತ್ತರವಿರಲಿಲ್ಲ.
ಕೊನೆಗೆ ಗೋಪಾಲ ಭಾಗ್ವತಕರ್ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿ ಇದ್ದ 18505ರೂಪಾಯಿಗಳನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ತಮಗಾದ ಅನ್ಯಾಯದ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಪ್ರಕರಣ ದಾಖಲಿಸಿದ ಪೊಲೀಸರು ಬ್ಯಾಂಕ್ ಖಾತೆಗೆ ಕನ್ನ ಹಾಕಿದವರ ಹುಡುಕಾಟ ನಡೆಸಿದ್ದಾರೆ.
