ಕಾರವಾರದಿಂದ ಅಂಕೋಲಾ ಕಡೆ ವೇಗವಾಗಿ ಬರುತ್ತಿದ್ದ ಬೈಕು ಅವರ್ಸಾದಲ್ಲಿ ಅಪಘಾತವಾಗಿದ್ದು, ಈ ಅವಘಡದಲ್ಲಿ ಬೈಕ್ ಸವಾರ ವಿಶ್ವನಾಥ ಶಡಗೇರಿ ಸಾವನಪ್ಪಿದ್ದಾರೆ.
ಅಂಕೋಲಾದ ಹುಲಿದೇವರವಾಡದ ವಿಶ್ವನಾಥ ಶಡಗೇರಿ (34) ಅವರು ಬೈಕ್ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಗಸ್ಟ 28ರ ಮಧ್ಯಾಹ್ನ 4 ಗಂಟೆ ಆಸುಪಾಸಿನಲ್ಲಿ ಅವರು ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಅವರ್ಸಾದ ಔತಣ ಹೊಟೇಲ್ ಬಳಿ ಅವರ ಬೈಕು ಚರಂಡಿ ಪಕ್ಕದ ಸಿಮೆಂಟ್ ಕಟ್ಟೆಗೆ ಡಿಕ್ಕಿಯಾಯಿತು.
ಆ ಡಿಕ್ಕಿ ರಭಸಕ್ಕೆ ವಿಶ್ವನಾಥ ಶಡಗೇರಿ ಅವರು ನೆಲಕ್ಕೆ ಬಿದ್ದಿದ್ದು, ಅವರ ಕುತ್ತಿಗೆ ಭಾಗಕ್ಕೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಕಾಲಿಗೂ ಸಹ ಗಾಯವಾಯಿತು. ಅವರನ್ನು ಅಲ್ಲಿದ್ದವರು ಅಂಕೋಲಾ ಆಸ್ಪತ್ರೆಗೆ ದಾಖಲು ಮಾಡಿದರು. ಪರಿಕ್ಷಿಸಿದ ವೈದ್ಯರು ತುರ್ತು ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ವಿಶ್ವನಾಥ ಶಡಗೇರಿ ಅವರನ್ನು ಕಾರವಾರ ಆಸ್ಪತ್ರೆಗೆ ಸಾಗಿಸುವಾಗ ಸಂಜೆಯಾಗಿದ್ದು, ಅಷ್ಟರೊಳಗೆ ಅವರು ಸಾವನಪ್ಪಿದರು.
ಕಾರವಾರ ಆಸ್ಪತ್ರೆ ವೈದ್ಯರು ವಿಶ್ವನಾಥ ಶಡಗೇರಿ ಅವರ ಸಾವನ್ನು ಖಚಿತಪಡಿಸಿದರು. ಕಾರವಾರ ಆಸ್ಪತ್ರೆಯಲ್ಲಿರುವ ಗಜಾನನ ಆಗೇರ್ ಅವರು ಸತೀಶ ಅಂಬಿಗ ಅವರ ಮೂಲಕ ಈ ಸಾವಿನ ಬಗ್ಗೆ ಲಿಖಿತ ಹೇಳಿಕೆ ನೀಡಿದ್ದು, ಅದರ ಆಧಾರದಲ್ಲಿ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು.
