ಹಳಿಯಾಳದ ಪ್ರಮೋದ ಸಾಂಬ್ರೇಕರ್ ಹಾಗೂ ಹರಿದಾಸ ಭಂಡಾರಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಳ್ಳರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ಹಳಿಯಾಳದ ಗಣೇಶನಗರದಲ್ಲಿ ಪ್ರಮೋದ ಸಾಂಬ್ರೇಕರ್ ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಅಗಸ್ಟ 27ರ ರಾತ್ರಿ ಅವರು ಮನೆಯಲ್ಲಿಲ್ಲದ ಅವಧಿಯಲ್ಲಿ ಕಳ್ಳರು ಕನ್ನ ಹಾಕಿದರು. ಮನೆ ಬಾಗಿಲು ಒಡೆದು ಒಳಗೆ ಬಂದ ಕಳ್ಳರು ರೂಮಿನೊಳಗಿನ ಬಟ್ಟೆಗಳನ್ನು ಚಲ್ಲಾಪಿಲ್ಲಿ ಮಾಡಿದ್ದು, ಹಣವೂ ಸೇರಿ 79500ರೂ ಮೌಲ್ಯದ ಸಾಮಗ್ರಿ ದೋಚಿದರು. ಅಗಸ್ಟ 28ರಂದು ಪ್ರಮೋದ ಸಾಂಬ್ರೇಕರ್ ಅವರು ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಅರಿವಿಗೆ ಬಂದಿತು.
ಮAಗಳವಾಡ ಶಿಕ್ಷಕ ಹರಿದಾಸ ಭಂಡಾರಿ ಅವರು ಸದಾಶಿವನಗರದಲ್ಲಿ ವಾಸವಾಗಿದ್ದು, ಅವರ ಮನೆಯಲ್ಲಿಯೂ ಕಳ್ಳರು ಕೈ ಚಳಕ ತೋರಿದ್ದಾರೆ. ವಿವಿಧ ಬಗೆಯ ಚಿನ್ನದ ಆಭರಣಗಳ ಜೊತೆ ಕಳ್ಳರು ಪರಾರಿಯಾಗಿದ್ದಾರೆ. ಇಲ್ಲಿಯೂ ಮನೆ ಬಾಗಿಲು ಮುರಿದ ಕಳ್ಳರು ಮನೆಯೊಳಗಿದ್ದ ಕಪಾಟಿನ ಕೀಯನ್ನು ಬಳಸಿ ಕಳ್ಳತನ ಮಾಡಿದ್ದಾರೆ. ಒಟ್ಟು 131400ರೂ ಮೌಲ್ಯದ ಚಿನ್ನಾಭರಣ ಕಾಣೆಯಾಗಿದೆ.
ಈ ಎರಡು ಕಳ್ಳತನದ ಬಗ್ಗೆ ಮನೆಯವರು ಪೊಲೀಸ್ ದೂರು ನೀಡಿದ್ದು, ಹಳಿಯಾಳ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ.
`ಮನೆ ಬಿಟ್ಟು ಹೋಗುವ ಮುನ್ನ ಪೊಲೀಸರಿಗೆ ತಿಳಿಸಿ’
